ವಿಶಾಖಪಟ್ಟಣ: ವೆಸ್ಟ್ ಇಂಡೀಸ್ ವಿರುದ್ಧ 2 ನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಇತಿಹಾಸದ ಅತೀ ವೇಗದಲ್ಲಿ 10 ಸಾವಿರ ರನ್‌ಗಳನ್ನು ಪೂರೈಸಿದ ದಾಖಲೆ ಬರೆದಿದ್ದಾರೆ. ಇದರಿಂದಾಗಿ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದ್ದ 2 ದಾಖಲೆಗಳನ್ನು ಒಂದೇ ದಿನ ಮುರಿದಿದ್ದಾರೆ.
ಕೊಹ್ಲಿ 205 ಇನ್ನಿಂಗ್ಸ್‌ಗಳಲ್ಲಿ ಆಡುವ ಮೂಲಕ 10 ಸಾವಿರ ರನ್‌ಗಳ ಗಡಿ ದಾಟಿ ದಾಖಲೆ ಬರೆದಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಪೂರೈಸಲು 259 ಇನ್ನಿಂಗ್ಸ್‌ಗಳಲ್ಲಿ ಆಡಿದ್ದರು. ಸೌರವ್ ಗಂಗೂಲಿ ಮೂರನೇ ಸ್ಥಾನದಲ್ಲಿದ್ದು 263 ಇನ್ನಿಂಗ್ಸ್‌ಗಳಲ್ಲಿ ಆಡಿದ್ದರು.
ಕೊಹ್ಲಿ ಸಚಿನ್ ಅವರ ಇನ್ನೊಂದು ದಾಖಲೆಯನ್ನು ಮುರಿದರು. ಇದುವರೆಗೆ ಸಚಿನ್ ವಿಂಡೀಸ್ ಎದುರಿನ ಅತೀ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದರು.1573 ರನ್‌ಗಳ ದಾಖಲೆ ಸಚಿನ್ ಹೆಸರಿನಲ್ಲಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮಾ 4 ರನ್‌ಗಳಿಸಿ ಔಟಾದರು. ಬಳಿಕ ಧವನ್ 29 ರನ್‌ಗಳಿಸಿ ಔಟಾದರು.
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 106 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು.
ಕೊಹ್ಲಿಗೆ ಸಾಥ್ ನೀಡಿದ ಅಂಬಾಟಿ ರಾಯಡು 73 , ಧೋನಿ 20, ರಿಷಭ್ ಪಂತ್ 17 ರನ್‌ಗಳಿಸಿ ಔಟಾದರು.