ರತ್ಲಂ (ಮಧ್ಯಪ್ರದೇಶ): ಸಿನಿಮಾ ನಟರಿಗೆ, ಕ್ರೀಡಾತಾರೆಯರಿಗೆ ಹುಚ್ಚು ಅಭಿಮಾನಿ ಗಳಿರುವುದು ಹೊಸಸುದ್ದಿಯಲ್ಲ. ಅವರನ್ನು ದೇವರೆಂದು ಪೂಜಿಸುವುದರಿಂದ ಹಿಡಿದು, ಆತ್ಮಾಹುತಿ ಮಾಡಿಕೊಳ್ಳುವ ಮಟ್ಟಕ್ಕೆ ತಲುಪುವುದು ಹಿಂದಿನಿಂದಲೂ ನಡೆದಿದೆ. ಇದೀಗ ಅಂತಹದ್ದೆ ಅತಿರೇಕದ ಸುದ್ದಿಯೊಂದು ಮಧ್ಯಪ್ರದೇಶದಿಂದ ವರದಿಯಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೇಲಿನ ಹುಚ್ಚು ಅಭಿಮಾನವೇ ಈ ಆತ್ಯಹತ್ಯೆಗೆ ಕಾರಣ!
ಆಫ್ರಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ಆ ದಿನ ಕೊಹ್ಲಿ ಕೇವಲ 5 ರನ್‌ಗೆ ಔಟಾಗಿದ್ದರು. ಇದರಿಂದ ಲಕ್ಷಾಂತರ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆದಿದ್ದೇ ಬೇರೆ. ನಿವೃತ್ತ ರೈಲ್ವೆ ಅಧಿಕಾರಿಯಾಗಿದ್ದ ಬಾಬುಲಾಲ್ ಬರಿಯಾ ಸ್ವಲ್ಪಮಟ್ಟಿಗೆ ಮದ್ಯಪಾನದ ನಶೆಯಲ್ಲಿದ್ದರು. ಅದೇ ಸಮಯದಲ್ಲಿ ಕೊಹ್ಲಿ ಔಟಾಗಿದ್ದನ್ನು ಟೀವಿಯಲ್ಲಿ ನೋಡಿದ್ದಾರೆ. ಕೂಡಲೇ ಸೀಮೆಯೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಅವರ ಕೂಗಾಟ ಕೇಳಿ ಮನೆಯವರು ಓಡಿ ಬಂದು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರು. ಅಷ್ಟರಲ್ಲಾಗಲೆ ಮುಖ, ಕೈ, ಬೆನ್ನು ಸೇರಿ ಹಲವು ಭಾಗ ಸುಟ್ಟು ಹೋಗಿತ್ತು. ಆರಂಭದಲ್ಲಿ ಬದುಕಬಹುದೆಂದು ನಿರೀಕ್ಷೆಯಿತ್ತು. ಪರಿಸ್ಥಿತಿ ಕೈಮೀರಿ ಸಾವಿಗೀಡಾಗಿದ್ದಾರೆ.
ಸದ್ಯದ ವರದಿಗಳ ಪ್ರಕಾರ ಕೊಹ್ಲಿಯ ಮೇಲಿನ ಅಭಿಮಾನದಿಂದ ಅವರು ಸತ್ತಿದ್ದಾರೆ. ಮರಣಕ್ಕೆ ಸಂಬಂಧಿಸಿದಂತೆ ಬರಿಯಾರಿಂದ ಸಿಕ್ಕ ಸಾಕ್ಷಿಗಳು ಅದನ್ನೇ ದೃಢಪಡಿಸಿವೆ. ಈ ಬಗ್ಗೆ ದೂರು ದಾಖಲಾಗಿದೆ. ವಿಚಿತ್ರವೆಂದರೆ 2009ರಲ್ಲಿ ಬರಿಯಾ ಅವರ ಇಬ್ಬರು ಮಕ್ಕಳಲ್ಲಿ ಒಬ್ಬರು
ಆತ್ಮಹತ್ಯೆ ಮಾಡಿಕೊಂಡಿದ್ದಾರೆ.