ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ ಸೂಪರ್ 12ನ ಎಂಸಿಜಿಯಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತವು ಪಾಕಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಅಜೇಯ ಆಟವಾಡಿದ ವಿರಾಟ್ 82 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪವರ್ ಪ್ಲೇನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಾಗ ಹಾರ್ದಿಕ್ ಜೊತೆಸೇರಿದ ವಿರಾಟ್ ಶತಕದ ಜೊತೆಯಾಟವಾಡಿದರು. ಪಂದ್ಯದ ಬಳಿಕ ಮಾತನಾಡಿದ ವಿರಾಟ್, ಈ ಪಂದ್ಯದಲ್ಲಿನ ತಮ್ಮ ರಣತಂತ್ರದ ಬಗ್ಗೆ ಹೇಳಿದರು.
“ಭಾವನೆಯನ್ನು ಹೇಗೆ ವಿವರಿಸಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ. ಕೆಲವು ಪ್ರಾಯೋಗಿಕ ವಿಷಯಗಳ ಬಗ್ಗೆ ಮಾತನಾಡುವುದಾದರೆ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗೆ ಬಂದಾಗ ನಿಜವಾಗಿಯೂ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು” ಎಂದು ಕೊಹ್ಲಿ ಹೇಳಿದರು.
ಇದನ್ನೂ ಓದಿ:ಯೋಧರ ಜೊತೆ ದೀಪಾವಳಿ ಆಚರಿಸಲು ಕಾರ್ಗಿಲ್ ಗೆ ತೆರಳಿದ ಪ್ರಧಾನಿ ಮೋದಿ
ಈ ಗುರಿ ಚೇಸ್ ಮಾಡುವುದು ಸಾಧ್ಯ ಎಂದು ಹಾರ್ದಿಕ್ ಪಾಂಡ್ಯ ಹೇಳುತ್ತಲೇ ಇದ್ದರು. ಸರಿಯಾದ ಸಮಯದಲ್ಲಿ ಬೌಂಡರಿಗಳೂ ಬಂತು. ಮೂರು ಓವರ್ ಗಳಲ್ಲಿ 50 ರನ್ ಬೇಕಾಗಿದ್ದಾಗ ಹ್ಯಾರಿಸ್ ರೌಫ್ ಒಂದು ಓವರ್ ಬೌಲ್ ಮಾಡಲಿದ್ದಾಗ ಇದು ಸವಾಲಾಗಬಹುದು ಎಂದು ಭಾವಿಸಿದೆ. ನಾವು ಹ್ಯಾರಿಸ್ ರೌಫ್ ಬೌಲಿಂಗ್ ನಲ್ಲಿ ಮುನ್ನುಗ್ಗಿ ಹೊಡೆದರೆ ಪಾಕಿಸ್ತಾನವು ಪ್ಯಾನಿಕ್ ಆಗುತ್ತದೆ ಎಂದು ನಾನು ಹಾರ್ದಿಕ್ ಗೆ ಹೇಳಿದೆ. ಎಂಟು ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿದ್ದಾಗ, ನಾನು ಎರಡು ಸಿಕ್ಸರ್‌ಗಳನ್ನು ಗಳಿಸಬೇಕು ಎಂದುಕೊಂಡೆ ಹಾಗೆ ಆಯಿತು ಎಂದು ವಿರಾಟ್ ಹೇಳಿದರು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನವು 8 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿದರೆ, ಭಾರತ ತಂಡವು ಆರು ವಿಕೆಟ್ ಕಳೆದುಕೊಂಡು ಅಂತಿಮ ಎಸೆತದಲ್ಲಿ ಗುರಿ ತಲುಪಿ ಜಯ ಸಾಧಿಸಿತು.