ಪುಣೆ: ಟೀಂ ಇಂಡಿಯಾ ನಾಯಕ ರನ್ ಮೆಶಿನ್ ವಿರಾಟ್ ಕೊಹ್ಲಿ ಪುಣೆ ಅಂಗಳದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಟೆಸ್ಟ್ ಜೀವನದ ಏಳನೇ ದ್ವಿಶತಕ ಬಾರಿಸಿದರು.
ಗುರುವಾರದ ಆಟದ ಅಂತ್ಯದಲ್ಲಿ 63ರನ್ ಮಾಡಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದ ಕೊಹ್ಲಿ ಇಂದು ತನ್ನ 26ನೇ ಶತಕ ಪೂರೈಸಿದರು. ಮೊದಲು ರಹಾನೆ ಜೊತೆಗೆ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ನಂತರ ರವೀಂದ್ರ ಜಡೇಜಾ ಜೊತೆಗೂಡಿ ಇನ್ನಿಂಗ್ಸ್ ಬೆಳೆಸತೊಡಗಿದರು.
10 ಇನ್ನಿಂಗ್ಸ್ ಗಳಲ್ಲಿ ಶತಕವಿಲ್ಲದೆ ನಿರಾಸೆ ಅನುಭವಿಸಿದ್ದ ಕೊಹ್ಲಿ ಇಂದು ಎಲ್ಲದಕ್ಕೂ ಉತ್ತರ ಕೊಟ್ಟರು. ತಮ್ಮ ಕ್ಲಾಸಿಕ್ ಹೊಡೆತಗಳಿಂದ ಅಭಿಮಾನಿಗಳ ಮನಗೆದ್ದ ಕೊಹ್ಲಿ ತನ್ನ ದ್ವಿಶತಕದ ಇನ್ನಿಂಗ್ಸ್ ನಲ್ಲಿ 28 ಬೌಂಡರಿ ಬಾರಿಸಿದರು.
ಬ್ರಾಡ್ ಮನ್ ದಾಖಲೆ ಮುರಿದ ಕೊಹ್ಲಿ
ಈ ಬ್ಯಾಟಿಂಗ್ ಪರಾಕ್ರಮದ ವೇಳೆ ಕೊಹ್ಲಿ ಹೊಸದೊಂದು ದಾಖಲೆ ಬರೆದರು. ನಾಯಕನಾಗಿ 9ನೇ ಸಲ 15ರ ಗಡಿ ದಾಟಿದ ವಿರಾಟ್ ಬ್ಯಾಟಿಂಗ್ ದಿಗ್ಗಜ ಡಾನ್ ಬ್ರಾಡ್ ಮನ್ ದಾಖಲೆ ಮುರಿದರು. ಬ್ರಾಡ್ ಮನ್ ಎಂಟು ಸಲ ಈ ಸಾಧನೆ ಮಾಡಿದ್ದರು.