ಅಬುಧಾಬಿ: ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕನಾಗಿ ಇದು ತನ್ನ ಕೊನೆಯ ಋತು ಎಂಬುದಾಗಿ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ಆದರೀಗ 2021ನೇ ಐಪಿಎಲ್ ನಡುವೆಯೇ ಅವರ ನಾಯಕತ್ವಕ್ಕೆ ಸಂಚಕಾರ ಬರಲಿದೆಯೇ ಎಂಬ ಪ್ರಶ್ನೆಯೊಂದು ಮೂಡಿದೆ. ಮಾಜಿ ಕ್ರಿಕೆಟಿಗರೊಬ್ಬರು ಈ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ ದಿಢೀರ್ ರಾಜೀನಾಮೆ ಘೋಷಣೆಯಿಂದ ತಂಡದ ಸಾಧನೆ ಮೇಲೆ ಪರಿಣಾಮ ಬೀರಲಿದೆ ಎಂದು ಅನೇಕ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದರು. ಅದರಂತೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಹೀನಾಯವಾಗಿ ಸೋಲನುಭವಿಸಿತ್ತು.
ಮೊದಲರ್ಧದಲ್ಲಿ ಉತ್ತಮವಾಗಿ ಆಡಿದ್ದ ಆರ್‌ಸಿಬಿ ಯುಎಇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿರುವುದು ಫ್ರಾಂಚೈಸಿಯ ಚಿಂತೆಗೆ ಕಾರಣವಾಗಿದೆ. ಆರ್‌ಸಿಬಿ ಮುಂದಿನ ಅಥವಾ ಇನ್ನೊಂದು ಪಂದ್ಯವನ್ನು ಹೀಗೆಯೇ ಸೋತರೆ ಟೂರ್ನಿಯ ನಡುವಲ್ಲೇ ಆರ್‌ಸಿಬಿ ನಾಯಕತ್ವದಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಕ್ರಿಕೆಟಿಗರೊಬ್ಬರು, “ಮುಂದಿನ ಪಂದ್ಯಗಳಿಗೆ ಕೊಹ್ಲಿ ಬದಲು ಮತ್ತೂಬ್ಬ ಆಟಗಾರನಿಗೆ ಆರ್‌ಸಿಬಿ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಈ ಕುರಿತು ಬೆಂಗಳೂರು ಫ್ರಾಂಚೈಸಿ ಕೂಡ ಕೊಹ್ಲಿ ಜತೆ ಚರ್ಚಿಸಿದ್ದು, ಅವರೂ ಇದಕ್ಕೆ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ’ ಎಂದಿದ್ದಾರೆ.
ಬದಲಾವಣೆ ಹೊಸತಲ್ಲ: ಐಪಿಎಲ್ ನಲ್ಲಿ ಇಂತಹ ಬದಲಾವಣೆ ಹೊಸತೇನಲ್ಲ. ಹಿಂದೆಯೂ ಹಲವು ತಂಡಗಳು ಅರ್ಧದಲ್ಲೇ ನಾಯಕನನ್ನು ಬದಲಿಸಿವೆ. ಕೆಕೆಆರ್ ದಿನೇಶ್ ಕಾರ್ತಿಕ್ ಅವರನ್ನು ಕೆಳಗಿಳಿಸಿ ಇಯಾನ್ ಮಾರ್ಗನ್ ಅವರನ್ನು ನೇಮಿಸಿತ್ತು. ಹೈದರಾಬಾದ್ ತಂಡದ ನಾಯಕತ್ವವನ್ನು ಡೇವಿಡ್ ವಾರ್ನರ್ ಅವರಿಂದ ಕೇನ್ ವಿಲಿಯಮ್ಸನ್‌ಗೆ ವರ್ಗಾಯಿಸಲಾಗಿತ್ತು. ಆರ್‌ಸಿಬಿಯಲ್ಲೂ ಇಂಥ ಪರಿವರ್ತನೆ ಸಂಭವಿಸುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಮಾಜಿ ಕ್ರಿಕೆಟಿಗರು ತಿಳಿಸಿದ್ದಾರೆ. ಆದರೆ ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಹೊಪರತುಪಡಿಸಿ ನಾಯಕತ್ವಕ್ಕೆ ತಾರಾ ಮೆರುಗು ತಂದುಕೊಡಬಲ್ಲ ಭಾರತೀಯ ಆಟಗಾರ ಯಾರಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ!