Advertisement

ಬ್ರಾಡ್‌ಮನ್‌ ಬಳಿಕ ಕೊಹ್ಲಿ: ಸಂಗಕ್ಕರ ಗುಣಗಾನ

09:39 PM Jun 14, 2020 | Sriram |

ಕೊಲಂಬೊ: ಜಾಗತಿಕ ಕ್ರಿಕೆಟಿನ ಮಹಾನ್‌ ಆಟಗಾರರ ಯಾದಿಯಲ್ಲಿ ಡೊನಾಲ್ಡ್‌ ಬ್ರಾಡ್‌ಮನ್‌ ಅವರಿಗೆ ಅಗ್ರಸ್ಥಾನವಿದೆ. ದಾಖಲೆಗಳ ಲೆಕ್ಕಾಚಾರದಲ್ಲಿ ಸಚಿನ್‌ ತೆಂಡುಲ್ಕರ್‌ ಬಹಳ ಮುಂದಿದ್ದಾರೆ. ಆದರೆ ಬ್ರಾಡ್‌ಮನ್‌ ಅನಂತರದ ಸರ್ವಶ್ರೇಷ್ಠ ಕ್ರಿಕೆಟಿಗನೆನಿಸಿಕೊಳ್ಳುವ ಎಲ್ಲ ಸಾಮರ್ಥ್ಯ ವಿರಾಟ್‌ ಕೊಹ್ಲಿ ಅವರಲ್ಲಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಹೇಳಿದ್ದಾರೆ.

Advertisement

“ವಿರಾಟ್‌ ಕೊಹ್ಲಿ ರನ್‌ ಹಸಿವು ನಿಜಕ್ಕೂ ದಂಗುಬಡಿಸುತ್ತದೆ. 32 ವರ್ಷ ಪೂರ್ತಿಯಾಗುವ ಮೊದಲೇ ಅವರು ಏಕದಿನದಲ್ಲಿ 12 ಸಾವಿರದಷ್ಟು ರನ್‌ ಪೇರಿಸಿಯಾಗಿದೆ. ಅವರು ದೈಹಿಕವಾಗಿ, ಮಾನಸಿಕವಾಗಿ ಬಹಳ ಗಟ್ಟಿಗ. ಆಟದಲ್ಲಿ ತೋರುವ ನಿಷ್ಠೆ, ಬದ್ಧತೆ ಅಮೋಘ. ಹೀಗಾಗಿ ಡಾನ್‌ ಬ್ರಾಡ್‌ಮನ್‌ ಅನಂತರದ ಸ್ಥಾನವನ್ನು ಅಲಂಕರಿಸುವ ಎಲ್ಲ ಯೋಗ್ಯತೆ ಕೊಹ್ಲಿ ಅವರಲ್ಲಿದೆ’ ಎಂದು ಕುಮಾರ ಸಂಗಕ್ಕರ “ಆರ್‌ಕೆ ಶೋ’ದಲ್ಲಿ ಹೇಳಿದರು.

ಸ್ಫೂರ್ತಿ ತುಂಬುವ ಆಟಗಾರ
“ಕೊಹ್ಲಿ ಕ್ರಿಕೆಟಿನ ಅಪರೂಪದ ತಳಿ. ತಾನು ಆಡುವ ಜತೆಗೆ ಇತರರಲ್ಲಿ ಸ್ಫೂರ್ತಿಯನ್ನೂ ತುಂಬುತ್ತಾರೆ. ತಮ್ಮ ಭಾವನೆಗಳನ್ನು ಹೊರಗೆಡವಲು ಹಿಂದೆ ಮುಂದೆ ನೋಡುವುದಿಲ್ಲ. ಅವರ ಲೀಡರ್‌ಶಿಪ್‌ ಕೂಡ ಅಮೋಘ’ ಎಂದು ಸಂಗಕ್ಕರ ಅಭಿಪಾಯಪಟ್ಟರು.

ವಿರಾಟ್‌ ಕೊಹ್ಲಿ ಆಧುನಿಕ ಕ್ರಿಕೆಟಿನ ಸರ್ವಶ್ರೇಷ್ಠ ಆಟಗಾರ. ಏಕದಿನದಲ್ಲಿ 43 ಶತಕ ಸೇರಿದಂತೆ 11,867 ರನ್‌ ಪೇರಿಸಿದ್ದಾರೆ. ಟೆಸ್ಟ್‌ ಗಳಿಕೆ 7,240 ರನ್‌. ಇದರಲ್ಲಿ 27 ಶತಕ ಸೇರಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಶತಕಗಳ ಸಂಖ್ಯೆ 70ಕ್ಕೆ ಏರಿದ್ದು, ತೆಂಡುಲ್ಕರ್‌ ದಾಖಲೆಯನ್ನು ಮುರಿಯುವ ಸಾಧ್ಯತೆ ಗೋಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next