ಆಡಿಲೇಡ್: ಕಿಂಗ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಇನ್ನೊಂದು ದಾಖಲೆ ಬರೆದಿದ್ದಾರೆ. ಅಡಿಲೇಡ್‌ನಲ್ಲಿ ಗುರುವಾರ ಗುರುವಾರ ಅರ್ಧಶತಕ ಬಾರಿಸಿದ ಅವರು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಸಾವಿರ ರನ್ ಪೂರೈಸಿದ ಮೊದಲಿಗ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಮುನ್ನ ಅಡಿಲೇಡ್‌ನಲ್ಲೇ ನಡೆದ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ರನ್ ಗಳಿಸಿದ ಸಾಧಕರಾಗಿ ಮೂಡಿ ಬಂದಿದ್ದರು. ಆಗ ಮಹೇಲ ಜಯವರ್ಧನ ಅವರ ದಾಖಲೆಯನ್ನು ಅಳಿಸಿ ಹಾಕಿದ್ದರು. ಜಯವರ್ಧನ 2014ರಲ್ಲಿ ಒಟ್ಟಾರೆ 1016 ರನ್ ಪೇರಿಸಿ ದಾಖಲೆ ನಿರ್ಮಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಪಂದ್ಯದ 15ನೇ ಓವರಿನಲ್ಲಿ 42 ರನ್ ಪೂರ್ತಿಗೊಳಿಸಿದ ಕೊಹ್ಲಿ ಟಿ20ಯಲ್ಲಿ 4 ಸಾವಿರ ರನ್ ಗಡಿ ದಾಟಿದರು. ಅದಿಲ್ ರಶೀದ್ ಅವರ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಅವರು 40 ಎಸೆತಗಳಿಂದ 50 ರನ್ ಬಾರಿಸಿದರು.
ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ರನ್ ಗಳಿಕೆ 4,008ಕ್ಕೇರಿತು. 115 ಪಂದ್ಯಗಳನ್ನಾಡಿದ ಅವರು 52.73 ಸರಾಸರಿಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 122 ರನ್ ಗಳಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
ಕೂಟದ ಗರಿಷ್ಠ ಸ್ಕೋರರ್:
ಈ ವಿಶ್ವಕಪ್‌ನಲ್ಲಿ ನಾಲ್ಕನೇ ಅರ್ಧಶತಕ ದಾಖಲಿಸಿರುವ ಕೊಹ್ಲಿ ಸದ್ಯ ಕೂಟದ ಗರಿಷ್ಠ ಸ್ಕೋರರ್ ಕೂಡ ಆಗಿದ್ದಾರೆ. ಆಡಿದ ಆರು ಪಂದ್ಯಗಳಿಂದ 98.66 ಸರಾಸರಿಯಲ್ಲಿ 296 ರನ್ ಗಳಿಸಿದ್ದಾರೆ. ಮೆಲ್ಬರ್ನ್ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಗಳಿಸಿರುವುದು ಕೂಡ ಇದರಲ್ಲಿ ಸೇರಿಕೊಂಡಿದೆ.