ಬೆಂಗಳೂರು: ಐಪಿಎಲ್ ಸೀಸನ್ 16ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಫಾಫ್ ಡುಪ್ಲೆಸಿಸ್ ಪಡೆ ಎಂಟು ವಿಕೆಟ್ ಅಂತರದ ಜಯಭೇರಿ ಸಾಧಿಸಿದೆ.
ಮುಂಬೈ ನೀಡಿದ 172 ರನ್ ಗುರಿ ಬೆನ್ನತ್ತಿದ್ದ ಆರ್ ಸಿಬಿಗೆ ಆರಂಭಿಕರಾದ ಫಾಫ್ ಮತ್ತು ವಿರಾಟ್ ಭರ್ಜರಿ ಜೊತೆಯಾಟವಾಡಿ ಆಧರಿಸಿದರು. ಇವರಿಬ್ಬರು ಮೊದಲ ವಿಕೆಟ್ ಗೆ 148 ರನ್ ಒಟ್ಟುಗೂಡಿಸಿದರು. ಫಾಫ್ 43 ಎಸೆತಕ್ಕೆ 73 ರನ್ ಮಾಡಿದರೆ, ವಿರಾಟ್ ಕೊಹ್ಲಿ ಅವರು 49 ಎಸೆತದಲ್ಲಿ ಅಜೇಯ 82 ರನ್ ಬಾರಿಸಿದರು.
ಇದನ್ನೂ ಓದಿ:ಮೇ ಯಿಂದ 5 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆ ಇಳಿಕೆ
ವಿರಾಟ್ ಕೊಹ್ಲಿ ಅವರು ಐಪಿಎಲ್ ನಲ್ಲಿ 50ನೇ 50 ಪ್ಲಸ್ ಸ್ಕೋರ್ ಆಗಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗರಾದರು. ಒಟ್ಟಾರೆ ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಡೇವಿಡ್ ವಾರ್ನರ್ 60 50 ಪ್ಲಸ್ ಸ್ಕೋರ್ ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ 49 ರೊಂದಿಗೆ ಒಟ್ಟಾರೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಪ್ರಸ್ತುತ 45 ಅರ್ಧಶತಕಗಳು ಮತ್ತು 5 ಶತಕಗಳನ್ನು ಬಾರಿಸಿದ್ದಾರೆ.
ಸೀಸನ್ ನ ಆರಂಭದ ಪಂದ್ಯದಲ್ಲಿ ಸೋಲನುಭವಿಸುವ ಮುಂಬೈ ಅಭ್ಯಾಸ ಮುಂದುರಿಯಿತು. ಕಳೆದ 11 ಸೀಸನ್ ನಿಂದಲೂ ಮುಂಬೈ ಇಂಡಿಯನ್ಸ್ ಸೀಸನ್ ನ ಮೊದಲ ಪಂದ್ಯದಲ್ಲಿ ಸೋಲನುಭವಿಸುತ್ತಿದೆ. ಇದೇ ವೇಳೆ ಮುಂಬೈ ವಿರುದ್ಧ ತಮ್ಮ ಕಳೆದ ಆರು ಪಂದ್ಯಗಳಲ್ಲಿ ಆರ್ ಸಿಬಿ ಐದನೇ ಗೆಲುವು ಸಾಧಿಸಿತು.