ನವದೆಹಲಿ: ಜೂ.2ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಬಹು ನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಪರ ನಾಯಕ ರೋಹಿತ್ ಶರ್ಮ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಆಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವರದಿಯೊಂದರ ಪ್ರಕಾರ, ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ, ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ಆರ್‌ಸಿಬಿ ತಂಡದಲ್ಲಿ ಆರಂಭಿರಾಗಿ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಈ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್ ಜತೆಗೆ ಆರಂಭಿಕರಾಗಿ ಆಡುತ್ತಿರುವ ಕೊಹ್ಲಿ ಈಗಾಗಲೇ 361 ರನ್ ನೊಂದಿಗೆ ಟೂರ್ನಿಯ ಅತ್ಯಧಿಕ ರನ್ ಸರದಾರರಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ, ವಿಶ್ವಕಪ್‌ನಲ್ಲಿ ರೋಹಿತ್ – ಕೊಹ್ಲಿ ಆರಂಭಿಕರಾಗಿ ಆಡಿದರೆ, ತಂಡ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಆಯ್ಕೆ ಸಮಿಯಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಸದ್ಯ ಆರಂಭಿಕ ಸ್ಥಾನಕ್ಕೆ ಗಿಲ್, ಜೈಸ್ವಾಲ್ ಪೈಪೋಟಿಯಲ್ಲಿದ್ದಾರೆ.
ಈ ತಿಂಗಳ ಅಂತ್ಯದೊಳಗೆ ಟಿ20 ವಿಶ್ವಕಪ್‌ಗೆ ತಂಡ ಪ್ರಕಟಗೊಳ್ಳುವ ಸಾಧ್ಯತೆಯಿದೆ. 20 ಜನರನ್ನೊಳಗೊಂಡ ತಂಡವನ್ನು ಬಿಸಿಸಿಐ ಪ್ರಕಟಿಸಲಿದ್ದು, ಇದರಲ್ಲಿ 5 ಮಂದಿ ಮೀಸಲು ಆಟಗಾರರು ಇರುವುದನ್ನು ನಿರೀಕ್ಷಿಸಲಾಗಿದೆ. ಈಬಾರಿಯ ತಂಡದಲ್ಲಿ ಅನುಭವಿಗಳು ಹೆಚ್ಚಿದ್ದು, ಅಚ್ಚರಿಯ ಮುಖಗಳು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ವರದಿಗಳು ಹೇಳಿವೆ.