ದಾಂಡೇಲಿ: ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಹಾಗೂ ಹಿಂದು ಧರ್ಮ ಸಂಸ್ಥಾಪನೆಗಾಗಿ ಮತ್ತು ಧರ್ಮ ಜಾಗೃತಿಗಾಗಿ ಹಿಂದೂ ಸಮಾಜೋತ್ಸವ ಸಮಿತಿ ಹಾಗೂ ವಿವಿಧ ಹಿಂದು ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಇಂದು ದಾಂಡೇಲಿ ನಗರದ ಸುಭಾಸನಗರದ ಒಳ ಕ್ರೀಡಾಂಗಣ ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶದ ನಿಮಿತ್ತ ಹಮ್ಮಿಕೊಂಡ ಭವ್ಯ ಶೋಭಾಯಾತ್ರೆ ಸಂಭ್ರಮ, ಸಡಗರದಿಂದ ನಡೆಯಿತು.
ಸುಭಾಸ ನಗರದ ಒಳ ಕ್ರೀಡಾಂಗಣದಿಂದ ಆರಂಭಗೊಂಡ ಶೋಭಾ ಯಾತ್ರೆಯು, ನಗರದ ಬರ್ಚಿ ರಸ್ತೆ, ಕೆ.ಸಿ. ವೃತ್ತ, ಪಟೇಲ್ ವೃತ್ತ, ಜೆ.ಎನ್. ರಸ್ತೆಯ ಮಾರ್ಗವಾಗಿ ಕೊನೆಯಲ್ಲಿ ಸುಭಾಸನಗರದಲ್ಲಿ ಸಂಪನ್ನಗೊಂಡಿತು.
ನಗರದ ವಿವಿಧ ವಾರ್ಡ್‌ಗಳಿಂದ ತಂಡ ತಂಡವಾಗಿ ಬಂದು ಮೆರವಣಿಗೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯೆರನ್ನದೇ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಭಾಗವಹಿಸಿದವರ ಕೈಯಲ್ಲಿ ಕೇಸರಿ ಪತಾಕೆಗಳು, ಭಗವಾಧ್ವಜಗಳು ರಾರಾಜಿಸುತ್ತಿದ್ದವು. ಇನ್ನೂ ಮೆರವಣಿಗೆಯಲ್ಲಿ ವಿವಿಧ ವೇಷಭೂಷಣಗಳು, ಗೊಂಬೆಗಳು, ಸಮವಸ್ತ್ರದೊಂದಿಗೆ ಭಾಗವಹಿಸಿದ ಮಹಿಳಾ ಮಣಿಗಳು, ಕೇಸರಿ ಶಾಲು, ಪೇಟವನ್ನು ತೊಟ್ಟ ಹಿಂದು ಬಾಂಧವರು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದರು. ಸರಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.
ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಅಲ್ಲಲ್ಲಿ ತಂಪು ಪಾನೀಯ, ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಡಿವೈಎಸ್ಪಿ ಗಣೇಶ್ ಕೆ.ಎಲ್. ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಒದಗಿಸಲಾಗಿತ್ತು