ಮಲ್ಲೂರ್: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಅತ್ಯುತ್ತಮ ಬ್ಯಾಟರ್ ಗಳು. ರನ್ ಸುರಿಮಳೆಗೈಯುವ ಮಾಜಿ ನಾಯಕ ಮತ್ತು ಹಾಲಿ ನಾಯಕ ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಸದಾ ವಿರಾಟ್- ರೋಹಿತ್ ನಡುವೆ ಯಾರು ಶ್ರೇಷ್ಠ ಎಂಬ ರೀತಿಯ ಗಲಾಟೆ ಅಭಿಮಾನಿಗಳ ನಡುವೆ ನಡೆಯುತ್ತಲೇ ಇರುತ್ತದೆ. ಆದರೆ ಇಂತಹ ಜಗಳವೊಂದು ಮಿತಿಮೀರಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮಲ್ಲೂರಿನ ಇಬ್ಬರು ಗೆಳೆಯರಾದ ಪಿ ವಿಘ್ನೇಶ್ ಮತ್ತು ಧರ್ಮರಾಜ್ ಎಂಬುವರು ಮಂಗಳವಾರ ರಾತ್ರಿ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿ ಮದ್ಯಪಾನ ಮಾಡಿ ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರ ನಡುವೆ ಸಿಟ್ಟಿಗೆದ್ದ ಕೊಹ್ಲಿ ಹಾಗೂ ಆರ್‌ಸಿಬಿ ಅಭಿಮಾನಿ ಧರ್ಮರಾಜ್, ರೋಹಿತ್ ಅಭಿಮಾನಿ ವಿಘ್ನೇಶ್ ಮೇಲೆ ಬಾಟಲಿ ಹಾಗೂ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ವಿಘ್ನೇಶ್ ಸಾವನ್ನಪ್ಪಿದ್ದು, ನಂತರ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಾತುಕತೆಯ ಸಂದರ್ಭದಲ್ಲಿ ವಿಘ್ನೇಶ್ ಅವರು ಧರ್ಮರಾಜ್ ಅವರನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು. ಧರ್ಮರಾಜ್ ಮಾನಾಡುವಾಗ ತೊದಲುವುದರಿಂದ ವಿಘ್ನೇಶ್ ಬಾಡಿಶೇಮ್ ಮಾಡಿದರು. ಅಲ್ಲದೆ ಅದನ್ನು ಕೊಹ್ಲಿ ಮತ್ತು ಆರ್‌ಸಿಬಿ ತಂಡದ ಪ್ರದರ್ಶನಗಳಿಗೆ ಹೋಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪಡುಬಿದ್ರಿ : ಕೆಎಸ್ಸಾರ್ಟಿಸಿ ಬಸ್ ಸಿಬಂದಿ ಮೇಲೆ ಹಲ್ಲೆ, ಆರೋಪಿಗಳ ಬಂಧನ
ಧರ್ಮರಾಜ್‌ಗೆ ಬಾಡಿ ಶೇಮ್ ಮಾಡುವ ಅಭ್ಯಾಸ ವಿಘ್ನೇಶ್ ಗೆ ಮೊದಲಿನಿಂದಲೂ ಇತ್ತು. ಆದರೆ ಈ ಬಾರಿ ಆರ್‌ಸಿಬಿ ತಂಡವನ್ನು ಧರ್ಮರಾಜ್ ಅವರ ಮಾತಿನ ತೊಂದರೆಗೆ ಹೋಲಿಸಿ ಟೀಕೆ ಮಾಡಿದ್ದರು. ಇದರಿಂದ ಕುಪಿತಗೊಂಡ ಧರ್ಮರಾಜ್ ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ, ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಕೂಡಲೇ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಡ್ಕೋ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿಗೆ ಬೆಳಗ್ಗೆ ವಿಘ್ನೇಶ್ ಶವ ಪತ್ತೆಯಾಗಿದೆ. ಪೊಲೀಸರು ಇದೀಗ ವಿಘ್ನೇಶ್ ಶವವನ್ನು ಅರಿಯಾಲೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಅರೆಸ್ಟ್ ಕೊಹ್ಲಿ ಎಂದು ಭಾರಿ ಟ್ವೀಟ್ ಗಳಾಗುತ್ತಿದೆ. ಇದಕ್ಕೆ ಕೊಹ್ಲಿ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.