Advertisement

ಕೊಲೆಯ ಸುತ್ತ ವೈರತ್ವ!

09:00 PM Oct 06, 2017 | |

ಒಂದು ಕೊಲೆ, ನಂತರ ಅದಕ್ಕೊಂದು ತನಿಖೆ, ಆಮೇಲೆ ಕೇಸ್‌ ಕ್ಲೋಸ್‌…! ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕೊಲೆ ಕೇಸ್‌ ಅನ್ನು ಮೂರ್‍ನಾಲ್ಕು ಹಂತದಲ್ಲಿ ನಡೆಸುತ್ತಿದ್ದಂತೆ, ಆರೋಪಿ ಯಾರೆಂಬ ಸುಳಿವು ಸಿಕ್ಕು, ಅವನಿಗೆ ಶಿಕ್ಷೆಯೂ ಆಗಿ ಹೋಗುತ್ತೆ. ಆದರೆ, “ವೈರ’ದಲ್ಲಿ ಸ್ವಲ್ಪ ಚೇಂಜ್‌ ಇದೆ. ಆ ಕಾರಣಕ್ಕೆ “ವೈರ’ ಚೂರಷ್ಟು ಇಷ್ಟ, ಮಿಕ್ಕಷ್ಟು “ಕಷ್ಟ’ ಎನಿಸುತ್ತೆ. ಇಲ್ಲಿ ಮೆಚ್ಚಿಕೊಳ್ಳುವ ಅಂಶವೆಂದರೆ, ಕೊಲೆಯ ಸುತ್ತ ಸಾಗುವ ಚಿಕ್ಕ ರೋಚಕತೆ.

Advertisement

ಚಿತ್ರ ನೋಡುಗರಿಗೆ ಅದೊಂದು “ಹಾರರ್‌’ ಫೀಲ್‌ ಕಟ್ಟಿಕೊಡುತ್ತಾ ಹೋಗುತ್ತೆ. ಬಹುಶಃ ಇಲ್ಲಿ ಥ್ರಿಲ್ಲಿಂಗ್‌ ಎಲಿಮೆಂಟ್ಸ್‌ ಇರದೇ ಹೋಗಿದ್ದರೆ, “ವೈರ’ ಇನ್ನಷ್ಟು ಕಷ್ಟವೆನಿಸುತ್ತಿತ್ತು. ಇಲ್ಲೊಂದಷ್ಟು ಥ್ರಿಲ್ಲರ್‌ ಮತ್ತು ಸಸ್ಪೆನ್ಸ್‌ ಅಂಶಗಳು ಹೇರಳವಾಗಿರುವುದರಿಂದಲೇ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಹಾಗಂತ, ಇಡೀ ಚಿತ್ರ ಕುತೂಹಲ ಮೂಡಿಸುತ್ತೆ ಎಂಬುದು ಸುಳ್ಳು. ಮೊದಲರ್ಧ ವೇಗಮಿತಿಯಲ್ಲೇ ಸಾಗುವ ಚಿತ್ರಕ್ಕೆ ದ್ವಿತಿಯಾರ್ಧ ಒಂದಷ್ಟು “ಧಮ್‌’ ಕಟ್ಟಿಕೊಡುತ್ತೆ ಎಂಬುದೇ ಸಮಾಧಾನ.

ಇಲ್ಲಿ ಹೇಳಿಕೊಳ್ಳುವಂತಹ ಗಟ್ಟಿ ಕಥೆ ಇರದಿದ್ದರೂ, ಚಿತ್ರಕಥೆಯಲ್ಲಿ ಕೊಂಚ ಬಿಗಿ ಹಿಡಿತವಿದೆ. ಅಲ್ಲಲ್ಲಿ ಬರುವ ಒಂದಷ್ಟು ತಿರುವುಗಳು, ಅದಕ್ಕೆ ಪೂರಕವಾಗಿ ಕೇಳಿಬರುವ ಹಿನ್ನೆಲೆ ಸಂಗೀತ ಚಿತ್ರವನ್ನು ಅತ್ತಿತ್ತ ಹರಿದಾಡಲು ಬಿಟ್ಟಿಲ್ಲ. ಹೊಸ ಧಾಟಿಯ ನಿರೂಪಣೆ ನೋಡುಗರ ಮಗ್ಗಲು ಬದಲಿಸುವುದಿಲ್ಲ ಎಂಬ ಸಣ್ಣ ಗ್ಯಾರಂಟಿ ಕೊಡಬಹುದು. ಅಲ್ಲಲ್ಲಿ ಎಡವಟ್ಟುಗಳಿದ್ದರೂ, ಮೊದಲೇ ಹೇಳಿದಂತೆ ಅದನ್ನೆಲ್ಲಾ ಹಿನ್ನೆಲೆ ಸಂಗೀತ ಪಕ್ಕಕ್ಕಿಡುತ್ತದೆ.

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರಗಳು ಬಂದಿವೆ. ಇದೂ ಸಹ ಅದೇ ಸಾಲಿನ ಸಿನಿಮಾವಾಗಿದ್ದರೂ, ಸಾಗುವ ಪರಿಯಲ್ಲಿ ಆಗಾಗ ಹೊಸತೆನಿಸಿದರೂ, ಅಲ್ಲಲ್ಲಿ ಭೀಕರವಾಗಿದೆ. ಇಲ್ಲಿ ಒಂದು ಕೊಲೆಯಾಗುತ್ತದೆ ಮತ್ತು ಆ ಕೊಲೆ ತೋರಿಸುವ ರೀತಿಯನ್ನು ಕೊಂಚ ಬದಲಿಸಿಕೊಳ್ಳುವ ಅವಕಾಶವಿತ್ತಾದರೂ, ನಿರ್ದೇಶಕರು ಹೆಣವನ್ನು ತುಂಡು ತುಂಡಾಗಿ ಕತ್ತರಿಸುವ ಚಿತ್ರಣವನ್ನು ಹಿಡಿದಿಟ್ಟು, ಮತ್ತಷ್ಟು ಭೀಕರತೆಗೆ ಸಾಕ್ಷಿಯಾಗುತ್ತಾರೆ.

ಅದನ್ನು ತೋರಿಸದೆಯೇ, ಕಥೆಯನ್ನು ನಿರೂಪಿಸಬಹುದಿತ್ತು. ನಿರ್ದೇಶಕರು ಆ ಜಾಣತನ ಮೆರೆದಿಲ್ಲ. ಉಳಿದಂತೆ ಒಂದು ಕೊಲೆಯ ಸಸ್ಪೆನ್ಸ್‌ ಕಥೆಯನ್ನು ತುಂಬ ಶಾರ್ಟ್‌ ಆಗಿ ಹೇಳಿ, ಅಷ್ಟೇ ಕಡಿಮೆ ಅವಧಿಯಲ್ಲಿ ತೋರಿಸುವಲ್ಲಿ ತೋರಿರುವುದೇ ಜಾಣತನ ಎನ್ನಬಹುದು. ಅದು ಮಡಿಕೇರಿ, ಅಲ್ಲೊಂದು ಶ್ರೀನಿಧಿ ಗೆಸ್ಟ್‌ ಹೌಸ್‌. ಅದು ಇಡೀ ಚಿತ್ರದ ಕೇಂದ್ರಬಿಂದು. ಕಾರಣ, ಆ ಮನೆಯಲ್ಲಿ ದೆವ್ವವಿದೆ ಎಂಬ ಪುಕಾರು. ಆ ಮನೆಗೊಬ್ಬ ಫೋಟೋಗ್ರಾಫ‌ರ್‌ ಬರುತ್ತಾನೆ.

Advertisement

ಅದಕ್ಕೂ ಮುನ್ನ ಒಬ್ಬ ಹುಡುಗಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ದಾಖಲಿಸಿಕೊಂಡು ಪೊಲೀಸರು ಹುಡುಕಾಟ ಶುರು ಮಾಡಿರುತ್ತಾರೆ. ಆ ಕಾಣೆಯಾದ ಹುಡುಗಿಗೂ, ಆ ಗೆಸ್ಟ್‌ಹೌಸ್‌ಗೆ ಬಂದಿಳಿದ ಫೋಟೋಗ್ರಾಫ‌ರ್‌ಗೂ ನಂಟು ಇದೆ ಅನ್ನೋದು ಗೊತ್ತಾಗುತ್ತೆ. ಪೊಲೀಸರು ಅಲ್ಲಿಂದ ತನಿಖೆ ಶುರುವಿಟ್ಟುಕೊಳ್ಳುತ್ತಾರೆ. ತನಿಖೆಯಲ್ಲಿ ಹುಡುಗಿ ಕೊಲೆಯಾಗಿರೋದು ದೃಢವಾದರೂ, ಮಾಡಿದ್ದು ಮಾತ್ರ ದೆವ್ವ ಅನ್ನೋದು ದಿಟವಾಗುತ್ತೆ.

ಹಾಗಾದರೆ, ಆ ಕೊಲೆ ಯಾಕೆ ನಡೀತು, ನಿಜವಾಗಿಯೂ ಮನೆಯಲ್ಲಿರುವ ದೆವ್ವ ಆ ಕೊಲೆಗೆ ಕಾರಣವಾಯ್ತಾ? ಅನ್ನೋದೇ ಸಸ್ಪೆನ್ಸ್‌. ಇಲ್ಲೊಂದು ಮುದ್ದಾದ ಲವ್‌ ಸ್ಟೋರಿ ಇದೆ. ಅಷ್ಟೇ ಗಟ್ಟಿಯಾಗಿರುವ ಗೆಳೆತನವೂ ಇದೆ. ಇದರ ನಡುವೆ  ಕುತೂಹಲದ ಸಂಗತಿಗಳೂ ಇವೆ. ಇಲ್ಲಿ ಯಾರು ವೈರತ್ವ ಕಟ್ಟಿಕೊಳ್ಳುತ್ತಾರೆ? ನಿಜಕ್ಕೂ ಆ ಕೊಲೆ ದೆವ್ವದ ದ್ವೇಷದಿಂದಾಗಿದ್ದಾ ಅಂತ ತಿಳಿಯೋ ಆಸಕ್ತಿ ಇದ್ದರೆ “ವೈರ’ ನೋಡಲ್ಲಡ್ಡಿಯಿಲ್ಲ.

ನವರಸನ್‌ ಇಲ್ಲಿ ಎರಡು ಕೆಲಸ ನಿರ್ವಹಿಸಿರುವುದರಿಂದ ಯಾವುದಕ್ಕೂ ಹೆಚ್ಚು ಒತ್ತು ಕೊಡಲು ಸಾಧ್ಯವಾಗಿಲ್ಲ. ಆದರೂ ಅವರು ಮೊದಲರ್ಧಕ್ಕಿಂತ ದ್ವಿತಿಯಾರ್ಧದ ನಟನೆಯಲ್ಲಿ ಗಮನಸೆಳೆಯುತ್ತಾರೆ. ಪ್ರಿಯಾಂಕ ಮಲ್ನಾಡ್‌ ಅವರ ಗ್ಲಾಮರ್‌ ಬಿಟ್ಟರೆ ನಟನೆ ಬಗ್ಗೆ ಹೇಳುವುದೇನಿಲ್ಲ. ತಬಲಾ ನಾಣಿ ಸಿಕ್ಕ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ. ಒಂದರ್ಥದಲ್ಲಿ ನಗಿಸುವ ಪ್ರಯತ್ನದಲ್ಲೇ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಬಂದು ಹೋಗುವ ಪಾತ್ರಗಳ್ಯಾವೂ ಅಷ್ಟೊಂದು ಗಮನಸೆಳೆಯಲ್ಲ. ರವಿ ಬಸ್ರೂರು ಹಿನ್ನೆಲೆ ಸಂಗೀತ ಪೂರಕವಾಗಿದೆ. ನಿತಿನ್‌ ಕ್ಯಾಮೆರಾದಲ್ಲಿ ಮಡಿಕೇರಿಯ ಸೊಬಗಿದೆ.

ಚಿತ್ರ: ವೈರ
ನಿರ್ಮಾಣ: ಧರ್ಮಶ್ರೀ ಮಂಜುನಾಥ್‌
ನಿರ್ದೇಶನ: ನವರಸನ್‌
ತಾರಾಗಣ: ನವರಸನ್‌, ಪ್ರಿಯಾಂಕ ಮಲ್ನಾಡ್‌, ತಬಲಾ ನಾಣಿ, ಕೌತಾರ್‌, ಕೆಂಪೇಗೌಡ, ಹ್ಯಾರಿ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next