ನವದೆಹಲಿ : ಇದೀಗ ಬಿರು ಬೇಸಿಗೆ ಎಲ್ಲರನ್ನೂ ದಂಗು ಬಡಿಸಿದೆ. ಈ ಸೆಕೆ ಕಡಿಮೆ ಮಾಡಲು ಏನಪ್ಪಾ.. ಮಾಡುವುದು ಎಂದು ಜನ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಫ್ಯಾನ್, ಎಸಿ ಇರುವವರು ಅದರ ಅಡಿಯಲ್ಲಿ ತಣ್ಣಗೆ ಕುಳಿತಿದ್ದಾರೆ. ಇದೆಲ್ಲ ಇಲ್ಲದ ಸಾಮಾನ್ಯರಿಗೆ ಮಾತ್ರ ಬಿಸಿಲಿನ ಧಗೆ ಸಾಕು ಸಾಕೆನಿಸಿದೆ. ಈ ಬೇಸಿಗೆ ಧಗೆಯನ್ನು ತಂಪು ಮಾಡಲು ಪಾಕಿಸ್ತಾನದ ಒಂದು ಹಳ್ಳಿಯ ಮಂದಿ ಸಖತ್ ಐಡಿಯಾ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು ಸುಡುವ ಬೇಸಿಗೆಯಲ್ಲಿ ತಂಗಾಳಿಯನ್ನು ಬಯಸಿರುವ ಮಂದಿ ಕತ್ತೆಯನ್ನು ಬಳಸಿ ದೇಸಿ ಫ್ಯಾನ್ ತಯಾರಿ ಮಾಡಿದ್ದಾರೆ. ಈ ಫ್ಯಾನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮರುಭೂಮಿ ಜಾಗದಲ್ಲಿ ಮಂಚದ ಮೇಲೆ ಕುಳಿತಿರುವ ಮಂದಿ ಒಂದು ಕತ್ತೆಯನ್ನು ಕಂಬಕ್ಕೆ ಕಟ್ಟಿ ಗಾಣದ ರೀತಿ ಸಿದ್ಧ ಮಾಡಿ ಅದಕ್ಕೆ ಬೆಡ್ ಶೀಟ್ ಅನ್ನು ಕಟ್ಟಿದ್ದಾರೆ. ಕತ್ತೆಯು ಸುತ್ತ ತಿರುಗುವಾಗ ಬೆಡ್ ಶೀಟ್ ಕೂಡ ತಿರುಗುತ್ತದೆ. ಅಲ್ಲದೆ ಬೆಡ್ ಶೀಟ್ ತಿರುಗುವ ರಭಸಕ್ಕೆ ತಣ್ಣನೆಯ ಗಾಳಿ ಬರುತ್ತದೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೂರ್ಲ್ನಾಲ್ಕು ಮಂದಿ ಮಂಚದ ಮೇಲೆ ಕುಳಿತಿದ್ದಾರೆ. ಅಲ್ಲದೆ ಹಿಂದಿಯ ಹಾಡೊಂದು ಕೇಳುತ್ತಿದ್ದು ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.
ವಿಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಸೆಕೆಗೆ ಪರಿಹಾರ, ಬೇಸಿಗೆಯ ಸೆಕೆಯನ್ನು ಕಡಿಮೆ ಮಾಡಲು ದೇಸಿಯವಾಗಿ ಸಿದ್ಧ ಮಾಡಿರುವ ಪರಿಹಾರ ಎಂದಿದ್ದಾರೆ.