Advertisement
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಹುಬಲಿ ಚಿತ್ರದ ‘ಕೌನ್ ಹೇ ಹೋ ಕೌನ್ ಹೇ’ ಹಾಡನ್ನು ಪಾರ್ಕ್ ವೊಂದರಲ್ಲಿ ಹುಡುಗನೊಬ್ಬ ಹಾಡುವ ಹಾಡು ಸಾಕಷ್ಟು ವೈರಲ್ ಆಗಿತ್ತು. ಆ ಹಾಡಿನ ಹಿಂದಿರುವ ಹುಡುಗ ಬಿಹಾರದ ಚಪ್ರ ಗ್ರಾಮದ ಚಂದನ್ ಕುಮಾರ್ ಗುಪ್ತಾ. ಚಂದನ್ ಕುಮಾರ್. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಪ್ರವೃತ್ತಿಯಲ್ಲಿ ಒಬ್ಬ ಪ್ರತಿಭಾವಂತ ಹಾಡುಗಾರ, ಹಾಡಿನ ದನಿಗೆ ಹೆಜ್ಜೆಯಿಡುವ ನೃತ್ಯಗಾರ ಕೂಡ ಹೌದು.
Related Articles
Advertisement
ಕೆಲ ಸಮಯ ಚೆನ್ನೈನಲ್ಲಿದ್ದ ಚಂದನ್, ಅಲ್ಲಿಯೂ ತಮಿಳು ಭಾಷೆಯನ್ನು ಕಲಿತು, ಅಲ್ಲಿನ ಖಾಸಗಿ ಟಿವಿಯ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈ ಎನ್ನಿಸಿಕೊಳ್ಳುತ್ತಾರೆ. ಅವಕಾಶಗಳು ಚಂದನ್ ರನ್ನು ಹುಡುಕುತ್ತಲೇ ಬಂದಿವೆ.
ಇತ್ತೀಚೆಗೆ ಸ್ನೇಹಿತನೊಬ್ಬನ ಮದುವೆಯ ಕಾರಣದಿಂದ ಚಂದನ್ ಊರಿಗೆ ಬರುತ್ತಾರೆ. ಲಾಕ್ ಡೌನ್ ನೆಪದಿಂದ ಊರಿನಲ್ಲೇ ನೆಲೆಯಾಗುತ್ತಾರೆ. ಅಲ್ಲಿ ಸ್ನೇಹಿತರ ಒತ್ತಾಯದಿಂದ ಚಂದನ್ ಹಾಡಲು ಒಪ್ಪುತ್ತಾರೆ.ಅದೇ ಸಮಯದಲ್ಲಿ ಹಾಡಿದ ಹಾಡು ಬಾಹುಬಲಿ ಚಿತ್ರದ ‘ಕೌನ್ ಹೇ ಹೋ ಕೌನ್ ಹೇ’ ಇದನ್ನು ಸ್ನೇಹಿತನೊಬ್ಬ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾನೆ. ಮೇ 17 ರಂದು ಪೋಸ್ಟ್ ಮಾಡಿದ್ದ ಆ ಹಾಡು ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗುತ್ತದೆ. ಕೈಲಾಸ್ ಖೇರ್ ಕಂಠದಂತೆಯೇ ಈ ಹುಡುಗನ ಹಾಡು ಇದೆ ಎಂದು ಜನ ಇದನ್ನು ಇಷ್ಟಪಡುತ್ತಾರೆ. ಇದುವರೆಗೆ ಚಂದನ್ ಹಾಡಿರುವ ಈ ಹಾಡು ಪೇಸ್ ಬುಕ್ ,ಇನ್ಸ್ಟಾ ಗ್ರಾಮ್ ಸೇರಿದಂತೆ ಎಲ್ಲೆಡೆ ಸುಮಾರು 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.
ಚಂದನ್ ರಿಗೆ ಹಾಡು ಹೊಸತಲ್ಲ. ಅವಕಾಶಗಳಿಗಾಗಿ ಎಲ್ಲೆಡೆ ಅಲೆದಾಟ ನಡೆಸಿದ್ದಾರೆ. ಚಂದನ್ ಕನ್ನಡ, ತಮಿಳು,ತೆಲುಗು, ಪಂಜಾಬಿ,ಭೋಜ್‌ಪುರಿ, ಬಂಗಾಳಿ ಸೇರಿದಂತೆ ಒಟ್ಟು ಒಂಬತ್ತು ಭಾಷೆಯಲ್ಲಿ ಸರಾಗವಾಗಿ ಹಾಡನ್ನು, ಹಾಡಿನ ಭಾವವನ್ನು ವ್ಯಕ್ತಪಡಿಸುತ್ತಾರೆ.
ವೈರಲ್ ಆದ ಹಾಡಿನ ಬಳಿಕ ಚಂದನ್ ಅವರಿಗೆ ಅವಕಾಶಗಳು ಹುಡುಕುತ್ತಾ ಬರುತ್ತಿವೆ. ಹಿಂದಿಯ ಜನಪ್ರಿಯ ಹಾಡಿನ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ ನ ಆಡಿಷನ್ ಗಾಗಿ ಇವರಿಗೆ ಕರೆ ಬಂದಿದೆ. ಅವಕಾಶಗಳು ಹೇಗೆ ಬೇಕಾದರೂ ಬರಬಹುದು. ಮುನ್ನಡೆಯುವ ಒಂದು ಆತ್ಮವಿಶ್ವಾಸದ ಪ್ರಯತ್ನ ಬೇಕಷ್ಟೇ..
– ಸುಹಾನ್ ಶೇಕ್