ನವದೆಹಲಿ: ಬಹುತೇಕ ಜನರಿಗೆ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ರೈಲಿನಲ್ಲಿ ಪ್ರಯಾಣಿಸಬೇಕು ಎಂಬ ಇಚ್ಚೆ ಹೊಂದಿರುವುದು ಸಹಜ. ವಿಮಾನಯಾನಕ್ಕಿಂತ ಹೆಚ್ಚಾಗಿ ಜನರು ರೈಲು ಪ್ರಯಾಣವನ್ನೇ ಹೆಚ್ಚು ಅವಲಂಬಿಸಿಕೊಂಡಿದ್ದಾರೆ. ಯಾಕೆಂದರೆ ರೈಲು ಪ್ರಯಾಣ ದುಬಾರಿಯಲ್ಲ. ಆದರೆ ಇದಕ್ಕೆ ಅಪವಾದ ಎಂಬಂತೆ “ಭಾರತೀಯ ರೈಲ್ವೆ ಇಲಾಖೆಯ ಮಹಾರಾಜ ಎಕ್ಸ್ ಪ್ರೆಸ್” ರೈಲು ಪ್ರಯಾಣದ ದರ ಕೇಳಿದ್ರೆ ನೀವು ಹುಬ್ಬೇರಿಸುವುದು ಖಚಿತ!
ಮಹಾರಾಜ ಎಕ್ಸ್ ಪ್ರೆಸ್…ಏನಿದರ ವಿಶೇಷತೆ?
ಭಾರತೀಯ ರೈಲ್ವೆಯ ಕೆಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಶನ್ (ಐಆರ್ ಸಿಟಿಸಿ) ನ ಮಹಾರಾಜ ಎಕ್ಸ್ ಪ್ರೆಸ್ ನಲ್ಲಿ ಐಶಾರಾಮಿ ಪ್ರಯಾಣದ ಅನುಭವ ಪಡೆಯಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವುದು ಇದರ ಉದ್ದೇಶವಾಗಿದೆ.
ಮಹಾರಾಜ ಎಕ್ಸ್ ಪ್ರೆಸ್ ನ ಅಧಿಕೃತ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ, ಮಹಾರಾಜ ಎಕ್ಸ್ ಪ್ರೆಸ್ ತನ್ನ ಅತಿಥಿಗಳಿಗೆ ವಿಶಿಷ್ಟ ಅನುಭವವನ್ನು ಮರುಸೃಷ್ಟಿಸುತ್ತದೆ. ಈ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ದೊರಕಿದರೆ, ಭಾರತದ ಅದ್ಭುತ ಪ್ರವಾಸಿ ತಾಣಗಳ ಭೇಟಿಯ ಜೊತೆಗೆ ಪ್ರಯಾಣಿಕರಿಗೆ ಸ್ನೇಹಪರ ಬಟ್ಲರ್ ಸೇವೆಯೂ ಲಭ್ಯವಿದೆ. ಮಹಾರಾಜ ಎಕ್ಸ್ ಪ್ರೆಸ್ ನಾಲ್ಕು ಮಾರ್ಗಗಳಲ್ಲಿ ಸಂಚರಿಸಲಿದ್ದು, ಇದು ಏಳು ದಿನಗಳ ಸುದೀರ್ಘ ಪ್ರಯಾಣವಾಗಿದೆ. ಪ್ರಯಾಣಿಕರು ನಾಲ್ಕರಲ್ಲಿ ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಯಾವುದು ನಾಲ್ಕು ಮಾರ್ಗ?
- ಇಂಡಿಯನ್ ಪನೋರಮಾ: ದೆಹಲಿ, ಜೈಪುರ, ರಣಥಂಬೋರ್, ಫತೇಪುರ್ ಸಿಕ್ರಿ, ಆಗ್ರಾ, ಖಜರಾಹೋ, ವಾರಣಾಸಿ ದೆಹಲಿ (7 ದಿನ/6 ರಾತ್ರಿ ಪ್ರಯಾಣ)
- ದಿ ಇಂಡಿಯನ್ ಸ್ಲೆಂಡುರ್: ದೆಹಲಿ, ಆಗ್ರಾ, ರಣಥಂಬೋರ್, ಜೈಪುರ್, ಬಿಕಾನೇರ್, ಜೋಧ್ ಪುರ, ಉದಯ್ ಪುರ್, ಮುಂಬೈ (7 ದಿನ/6 ರಾತ್ರಿ ಪ್ರಯಾಣ
- ಹೆರಿಟೇಜ್ ಆಫ್ ಇಂಡಿಯಾ: ಮುಂಬೈ, ಉದಯ್ ಪುರ, ಜೋಧ್ ಪುರ, ಬಿಕಾನೇರ್, ಜೈಪುರ್, ರಣಥಂಬೋರ್, ಫತೇಪುರ್ ಸಿಕ್ರಿ, ಆಗ್ರಾ, ದೆಹಲಿ (7ದಿನ/6 ರಾತ್ರಿ ಪ್ರಯಾಣ)
- Treasures of India: ದೆಹಲಿ, ಆಗ್ರಾ, ರಣಥಂಬೋರ್ ಮತ್ತು ಜೈಪುರ್ (4 ದಿನ/3 ರಾತ್ರಿ)
ಈ ಐಶಾರಾಮಿ ಮಹಾರಾಜ ಎಕ್ಸ್ ಪ್ರೆಸ್ ರೈಲು ಪ್ರಯಾಣದ ಬಗ್ಗೆ ಕುಶಾಗ್ರ ಎಂಬ ಇನ್ ಸ್ಟಾಗ್ರಾಮ್ ಬಳಕೆದಾರರೊಬ್ಬರು ರೈಲಿನ ಪ್ರೆಸಿಡೆನ್ಶಿಯಲ್ ಸ್ಯೂಟ್ ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲೇ, ವ್ಯಕ್ತಿಯೊಬ್ಬರು ಮಹಾರಾಜ ಎಕ್ಸ್ ಪ್ರೆಸ್ ರೈಲಿನ ಪ್ರೆಸಿಡೆನ್ಶಿಯಲ್ ಸ್ಯೂಟ್ ಕೋಣೆಯ ಬಾಗಿಲನ್ನು ತೆರೆಯುವ ದೃಶ್ಯವಿದೆ. ವಿಶಾಲವಾದ ಕೋಣೆ, ಪ್ರತ್ಯೇಕ ಊಟದ ಸ್ಥಳ, ಸ್ನಾನ ಗೃಹ, ಎರಡು ಮಾಸ್ಟರ್ ಬೆಡ್ ರೂಮ್ ಗಳಿವೆ. ಅಂದಹಾಗೆ ಮಹಾರಾಜ ಎಕ್ಸ್ ಪ್ರೆಸ್ ರೈಲಿನ ಪ್ರೆಸಿಡೆನ್ಶಿಯಲ್ ಸ್ಯೂಟ್ ಪ್ರಯಾಣದ ವೆಚ್ಚ ಬರೋಬ್ಬರಿ 19 ಲಕ್ಷ ರೂಪಾಯಿ ಎಂದು ಕುಶಾಗ್ರ ತಿಳಿಸಿದ್ದಾರೆ.
ಮಹಾರಾಜ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಸಹಾಯಕರೊಬ್ಬರಿರುತ್ತಾರೆ. ಕಾಂಪ್ಲಿಮೆಂಟರಿ ಮಿನಿ ಬಾರ್, ಹವಾನಿಯಂತ್ರಿತ ಕೊಠಡಿ, ವೈ-ಫೈ ಇಂಟರ್ನೆಟ್ ಸೌಲಭ್, ಟೆಲಿವಿಷನ್, ಡಿವಿಡಿ ಪ್ಲೇಯರ್ಸ್, ವಿವಿಧ ಬಗೆಯ ರುಚಿಕರವಾದ ಊಟೋಪಚಾರ, ಪ್ರವೇಶ ಶುಲ್ಕದೊಂದಿಗೆ ಜನಪ್ರಿಯ ಸ್ಥಳಗಳ ವೀಕ್ಷಣೆ, ಅನುಭವಿ ಪ್ರವಾಸಿ ಗೈಡ್ ಗಳಿಂದ ಮಾಹಿತಿ, ಐಚ್ಚಿಕ ವಿಹಾರ, ಸ್ಪಾ, 24×7 ಸಿಸಿಟಿವಿ ಸಹಿತ ಭದ್ರತೆ ವ್ಯವಸ್ಥೆ ಇದೆ.
ಈ ವಿಡಿಯೋವನ್ನು ನವೆಂಬರ್ 10ರಂದು ಶೇರ್ ಮಾಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ನೀವು ಎಂದಾದರು ಭಾರತೀಯ ರೈಲ್ವೆಯ ಅತೀ ದುಬಾರಿ ಕೋಚ್ ಕಂಡಿದ್ದೀರಾ? ಎಂಬ ಕ್ಯಾಪ್ಶನ್ ಜೊತೆ ವಿಡಿಯೋ ಶೇರ್ ಮಾಡಿದ್ದು, ಇದಕ್ಕೆ ನೆಟ್ಟಿಗರು ಗಂಭೀರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
“ ನಾನು ಈ ಪ್ರಯಾಣ ವೆಚ್ಚದಲ್ಲಿ ಪ್ರಾಪರ್ಟಿ ಖರೀಸುತ್ತಿದ್ದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರ, ನಾನು ಈ ವೆಚ್ಚದಲ್ಲಿ ನ್ಯೂಯಾರ್ಕ್ ಅಥವಾ ವಿದೇಶ ಪ್ರಯಾಣ ಮಾಡಿಯೂ, ಅದರಲ್ಲಿಯೂ ಹಣ ಉಳಿಸುತ್ತಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.