ನವದೆಹಲಿ: ಚಮೋಲಿ ಜಿಲ್ಲೆಯ ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ ಸಮೀಪ ಬುಧವಾರ (ಜುಲೈ 10) ಭಾರೀ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲಿ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Sagara ವಿಎ ಆತ್ಮಹತ್ಯೆ ಯತ್ನ; ತಹಶೀಲ್ದಾರ್‌ರ ಕಿರುಕುಳ ಆರೋಪ
ಗುಡ್ಡ ಕುಸಿದು ಬಂಡೆ ಕೆಳಗೆ ಬೀಳುತ್ತಿರುವುದನ್ನು ಗಮನಿಸಿದ ಕಾರ್ಮಿಕರು ತಕ್ಷಣವೇ ಮತ್ತೊಂದು ರಸ್ತೆಯತ್ತ ಓಡೋಡಿ ಬರುತ್ತಿದ್ದಾಗಲೇ ದೊಡ್ಡ ಬಂಡೆ ಬಂದು ಅಪ್ಪಳಿಸಿ ಬಿಟ್ಟಿತ್ತು. ಆದರೆ ಅದೃಷ್ಟವಶಾತ್ ಅಷ್ಟರಲ್ಲಿ ಎಲ್ಲಾ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿಬಿಟ್ಟಿದ್ದರು!
ಆದರೆ ಈ ವಿಡಿಯೋವನ್ನು ಗುಡ್ಡ ಕುಸಿಯುತ್ತಿದ್ದಾಗಲೇ ಸೆರೆಹಿಡಿದಿದ್ದಾ ಅಥವಾ ರಸ್ತೆ ಮೇಲೆ ಬಿದ್ದಿದ್ದ ಬಂಡೆ, ಮಣ್ಣನ್ನು ತೆರೆವುಗೊಳಿಸುತ್ತಿರುವ ಸಂದರ್ಭದಲ್ಲಿ ಬಂಡೆ ಉರುಳಿ ಬೀಳುತ್ತಿರುವಾಗ ಸೆರೆ ಹಿಡಿದಿರುವುದಾ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ವಿವರಿಸಿದೆ.
ವೈರಲ್ ವಿಡಿಯೋದಲ್ಲಿ, ಕೆಲವು ಕಾರ್ಮಿಕರು ಡ್ರಿಲ್ ಉಪಕರಣ ಹಿಡಿದು ರಸ್ತೆಯಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲೇ ಬಂಡೆ ಕೆಳಗೆ ಉರುಳುತ್ತಿರುವುದನ್ನು ಗಮನಿಸಿ ಅಪಾಯವಿದೆ ಎಂಬ ವಿಶಲ್ ಶಬ್ದ ಬಂದ ಕೂಡಲೇ ಎಲ್ಲಾ ಕಾರ್ಮಿಕರು ಅಲ್ಲಿಂದ ದೂರ ಓಡಿರುವ ದೃಶ್ಯ ಸೆರೆಯಾಗಿದೆ.
ಚಮೋಲಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಕಲ್ಲು, ಬಂಡೆ, ಮಣ್ಣನ್ನು ತೆರವುಗೊಳಿಸುವ ಮೂಲಕ ಯಾತ್ರಾರ್ಥಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.