Advertisement

Viral: ರೋಡಲೀ ಸಾಗುತಾ… ಹೊಂಡವ ದಾಟಲು: ರಸ್ತೆ ಹೊಂಡಗಳ ವೈರಲ್‌ ಸಾಂಗ್‌ ಹುಟ್ಟಿದ್ದು ಹೇಗೆ?

11:34 AM Aug 16, 2024 | Team Udayavani |

ಕಟಪಾಡಿ: ಕರಾವಳಿಯ ರಸ್ತೆಗಳ ಹೊಂಡಗುಂಡಿಯ ವಿಡಿಯೊ ಜತೆಗೆ ಆಕರ್ಷಕ ಹಾಡೊಂದು ವೈರಲ್‌ ಆಗುತ್ತಿರುವುದನ್ನು ನೀವು ಕೇಳಿರಬಹುದು. ರಸ್ತೆ ಹೊಂಡಗಳ ಅವ್ಯವಸ್ಥೆ ವಿರುದ್ಧ ಮೂಡಿಬಂದ ಹಾಡಿನ ಹಿಂದೆ ಕುತೂಹಲಕಾರಿ ಕಥೆ ಇದೆ!

Advertisement

ರೋಡಲೀ ಸಾಗುತಾ.. ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ ಎಂದು ಆರಂಭಗೊಳ್ಳುವ ಈ ಹಾಡಿನ ನಡುವೆ ಅಯ್ಯೋ ಅಯ್ಯೋ ನಮಗ್ಯಾರ್ಗತಿ, ಹೇಳ್ಳೋರ್‌ ಕೇಳ್ಳೋರ್‌ ಇಲ್ಲ ಈ ಸರ್ತೀ ಅಯ್ಯೋ…. ಉಂದು ಎಂಚಿ ಸಾವುಯೇ ಎಂಬ ಆಕ್ರೋಶವೂ ಇದೆ.

ಹಾಡು ಹುಟ್ಟಿದ್ದು ಹೇಗೆ? ಹಾಡು ಗಾರ ಯಾರು?

ಅಂದ ಹಾಗೆ ಈ ಹಾಡನ್ನು ಬರೆದು ಹಾಡಿದವರು ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕುರ್ಕಾಲು ಜಯನಗರ ನಿವಾಸಿಯಾಗಿರುವ ಮದನ್‌ ಮಣಿಪಾಲ. ಇವರು ಮೂಲತಃ ಒಬ್ಬ ಹಾಡುಗಾರ. ಆದರೆ ಈ ರಸ್ತೆಗಳನ್ನು ನೋಡಿ ಹಾಡೊಂದು ಹಾಗೇ ಹುಟ್ಟಿಕೊಂಡು ಈಗ ಜಾಲತಾಣಗಳಲ್ಲಿ ವೈರಲ್‌ ಆಗುವಂತಾಗಿದೆ.

ವಯೋ ವೃದ್ಧ ದಂಪತಿ ತಮ್ಮ ದ್ವಿಚಕ್ರ ವಾಹನದಿಂದ ಇಳಿದು ನಡೆದು ಹೊಂಡ ಗುಂಡಿ ದಾಟಿ ಬಳಿಕ ದ್ವಿಚಕ್ರ ವಾಹನ ಹತ್ತಿ ಪ್ರಯಾಣ ಬೆಳೆಸಿದ ಪರಿಯನ್ನು ಕಂಡು ಮನಕಲಕಿ ಸಾಹಿತ್ಯವನ್ನು ರಚಿಸಿದ್ದಾಗಿ ಸಂಗೀತ ಕಲಾವಿದ ಮದನ್‌ ಮಣಿಪಾಲ ಅವರು ಉದಯವಾಣಿ ಜತೆ ಮಾತನಾಡುತ್ತಾ ಹೇಳಿದರು.

Advertisement

ಹೊಂಡ ಗುಂಡಿಯ ಸಂಕಷ್ಟವನ್ನು ಸ್ವತಃ ಅನುಭವಿಸಿದ ಅವರಿಗೆ ವೃದ್ಧ ದಂಪತಿಯ ನೋವು ಇನ್ನಷ್ಟು ಕಾಡಿತು. ಹೀಗಾಗಿ ಸಾಹಿತ್ಯ ರಚನೆಯಾಯಿತು. ಹಾಡನ್ನು ಅವರೇ ಹಾಡಿದರು. ಇಷ್ಟೇ ಇದ್ದರೂ ಸಾಲದು ಎಂಬಂತೆ ಗುಂಡಿಗಳ ಚಿತ್ರಣ, ಜನರು ಪಡುತ್ತಿರುವ ಪಾಡನ್ನು ವಿಡಿಯೊ ಚಿತ್ರೀಕರಣ ನಡೆಸಿ ವಿಡಿಯೊ ಸಾಂಗ್‌ ಆಗಿ ಪರಿವರ್ತಿಸಿದರು. ಅದು ಜಾಲತಾಣದಲ್ಲಿ ಹರಿದಾಡಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಮದನ್‌ ಗೋಪಾಲ್‌ ಅವರು ಮೂಲತಃ ಕಟಪಾಡಿ, ಸುಭಾಷ್‌ ನಗರ, ಬಂಟಕಲ್‌ ಭಾಗದ ರಸ್ತೆ ಹೊಂಡಗಳನ್ನು ಉಲ್ಲೇಖೀಸಿದ್ದಾರೆ. ಆದರೆ, ಈಗ ಅವರ ವೀಡಿಯೋದ ಹಾಡಿನ ಭಾಗವನ್ನಷ್ಟೇ ತೆಗೆದು ಜನರು ತಮ್ಮ ಊರಿನ ಹೊಂಡಗಳ ಚಿತ್ರಣವನ್ನು ಸೇರಿಸಿ ಹೊಸ ಹೊಸ ವೀಡಿಯೊ ಮಾಡುತ್ತಿದ್ದಾರೆ.

ಮೂಲ ಹಾಡು ಯಾವುದು ಗೊತ್ತೇ?

ಮದನ್‌ ಮಣಿಪಾಲ್‌ ಅವರು ಸಾಹಿತ್ಯ ರಚಿಸಿ ಹಾಡಿರುವ ಹಾಡಿನ ಮೂಲ ಸಾಹಿತ್ಯ ಆಗಸ್ಟ್‌ 15ರಂದು ತೆರೆ ಕಂಡ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ನಾಯ ಕ ನಾ ಗಿರುವ “ಕೃಷ್ಣಂ ಪ್ರಣಯ ಸಖೀ’ ಚಿತ್ರದ ಜನ ಪ್ರಿಯ ಹಾಡಿನದ್ದು. “ದ್ವಾಪರಾ ದಾಟುತಾ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ….’ ಹಾಡಿನ ಧಾಟಿಯಲ್ಲಿ ಮೂಡಿಬಂದ ರೋಡಲೀ ಸಾಗುತಾ.. ಹೊಂಡವ ದಾಟಲು ಜೀವವೇ ಬಾಯಿಗೆ ಬಂದಂತಿದೆ’ ಎಂಬ ಹಾಡು ಇದೀಗ ಸಾಕಷ್ಟು ರೀಲ್ಸ್‌ ಆಗುತ್ತಿದೆ.

ಕುಂಟುತಾ ಸಾಗಿ ಹೊಂಡ ತಪ್ಪಿಸಲು ಜೀವ ಝಲ್‌ ಎಂದಿದೆ. ಬೇರೆ ದಾರೀನು ಇಲ್ಲ ನಮಗಿನ್ನು, ಹೊಂಡವೇ ಉಳಿದಿದೇ.. ನಾವು ಹಾಕಿದ್ದ ಓಟಿನ ಬೆಲೆಯು ಈಗ ಗೊತ್ತಾಗಿದೆ ಎಂಬ ಹಾಡಿನ ಸಾಲುಗಳು ಜನರ ಆಕ್ರೋಶಕ್ಕೆ ಜೀವ ನೀಡಿವೆ.

ಬಸ್‌ ಚಾಲಕ ಗುಂಡಿಗೆ ಬಿದ್ದ ಬೇಸರದಲ್ಲಿ ಮೂಡಿದ ವೀಡಿಯೋ

ದಿನಂಪ್ರತಿ ಮೂರು ಟ್ರಿಪ್‌ ಇದೇ ರಸ್ತೆಯಲ್ಲಿ ಬಸ್‌ ಚಲಾಯಿಸುವ ಡ್ರೈವರ್‌ ಕರ್ತವ್ಯ ಬಿಟ್ಟು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಇಲ್ಲಿನ ಗುಂಡಿಗೆ ಬಿದ್ದು ಏಟಾಗಿದ್ದು, ಇದೀಗ ಮನೆಯಲ್ಲಿ ರೆಸ್ಟ್‌ ನಲ್ಲಿರುವುದು ರಸ್ತೆಯ ದುಃಸ್ಥಿತಿಗೆ ಸಾಕ್ಷಿ. ನನ್ನ ಮನೆಗೆ ಸಾಗುವ ಹಾದಿಯಲ್ಲಿ ನಿತ್ಯ ಐದು ನಿಮಿಷ ನಿಂತು ಇತರೇ ವಾಹನಗಳು ಸಾಗುವ ನಿತ್ಯ ಬವಣೆಯನ್ನು ಕಂಡು ಸಾಹಿತ್ಯ ರಚಿಸಿ, ವೀಡಿಯೋ ಚಿತ್ರೀಕರಿಸಿ, ಹಾಡು ರೆಕಾರ್ಡಿಂಗ್‌ ಪೂರೈಸಿದ್ದೇನೆ. ಸುಮಾರು ಮೂರೂವರೆ ಸಾವಿರ ರೂ. ಖರ್ಚಾ ಗಿದೆ. ಯಾವುದೇ ಪಕ್ಷಗಳ ವಿರುದ್ಧದ ಹಾಡಲ್ಲ. ರಸ್ತೆಯ ಹೊಂಡ-ಗುಂಡಿಗಳ ಪರಿಸ್ಥಿತಿಯ ಕರಾಳ ಮುಖವನ್ನು ವಿಡಿಯೋ ಸಾಂಗ್‌ ಮೂಲಕ ತೆರೆದಿಟ್ಟಿದ್ದೇನೆ. –ಮದನ್‌ ಮಣಿಪಾಲ, ಸಾಹಿತ್ಯ ಬರೆದ ಹಾಡುಗಾರ

-ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next