ಬೆಂಗಳೂರು: ಪಾಕಿಸ್ಥಾನ ತಂಡ ಶುಕ್ರವಾರ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ”ನಲ್ಲಿ ಮಹತ್ವದ ವಿಶ್ವಕಪ್ ಪಂದ್ಯವನ್ನು ಆಡಲಿದೆ. ಗೆಲುವಿನ ಹಳಿ ಏರಿರುವ, 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ. ಆದರೆ ಇದೇ ಹೊತ್ತಿಗೆ ಸರಿಯಾಗಿ ಪಾಕ್ ಆಟಗಾರರಿಗೆ ವೈರಲ್ ಜ್ವರ ಕಾಡಿರುವ ಸುದ್ದಿ ಆತಂಕಕ್ಕೆ ಕಾರಣವಾಗಿದೆ.
ವರದಿಯೊಂದರ ಪ್ರಕಾರ ಪಾಕಿ ಸ್ಥಾನದ ನಾಲ್ವರು ಕ್ರಿಕೆಟಿಗರು “ವೈರಲ್ ಫಿವರ್’ ಬಾಧೆಗೆ ಸಿಲುಕಿದ್ದಾರೆ. ಇವರೆಂದರೆ ಶಾಹೀನ್ ಶಾ ಅಫ್ರಿದಿ, ಶಫೀಕ್ ಅಬ್ದುಲ್ಲ, ಜಮಾನ್ ಖಾನ್ ಮತ್ತು ಉಸಾಮ ಮಿರ್.
ವೈರಲ್ ಜ್ವರದ ಸೂಚನೆ ಲಭಿಸಿ ದೊಡನೆ ಶಾಹಿನ್ ಶಾ ಅಫ್ರಿದಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಆ್ಯಂಟಿ ಬಯೋಟಿಕ್ ಡ್ರಿಪ್ಸ್ ಪಡೆದು ಕೊಂಡಿದ್ದಾರೆ. ಉಳಿದ ಮೂವರ ಸ್ಥಿತಿ ಅಷ್ಟೊಂದು ಆಶಾದಾಯಕವಾಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಇದು ಡೆಂಗ್ಯೂ ಅಲ್ಲ ಎಂಬುದು ಸಾಬೀತಾಗಿದೆ. ಎಲ್ಲರ ವೈದ್ಯಕೀಯ ಪರೀಕ್ಷೆಯ ವರದಿಯಲ್ಲೂ ನೆಗೆಟಿವ್ ಫಲಿತಾಂಶ ದಾಖಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಪಾಕಿಸ್ಥಾನ ತಂಡದ ಮಾಧ್ಯಮ ವ್ಯವಸ್ಥಾಪಕರ ಹೇಳಿಕೆ.
ಪಾಕಿಸ್ಥಾನ ಪಾಲಿಗೆ ಆಸ್ಟ್ರೇಲಿಯ ವಿರುದ್ಧದ ಪಂದ್ಯ ಅತ್ಯಂತ ಮಹತ್ವ ದ್ದಾಗಿದ್ದು, ಇಲ್ಲಿ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸಬೇಕಿದೆ.