Advertisement

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದ್ದು, ನಗರದಲ್ಲಿ ಡೆಂಘೀ, ವೈರಲ್‌ ಜ್ವರ, ನೆಗಡಿ, ಕೆಮ್ಮು ಸೇರಿ ಆರೋಗ್ಯ ಸಮಸ್ಯೆ ಪ್ರಕರಣಗಳು ಹೆಚ್ಚಾಗಿವೆ.

Advertisement

ಇನ್ನೂ ಎರಡು ಮೂರು ದಿನಗಳ ಕಾಲ ಇದೇ ರೀತಿಯ ಚಳಿಯ ವಾತಾವರಣ ಮುಂದುವರಿಯಲಿದೆ. ಇದರ ಜತೆಗೆ ಶೀತ ಗಾಳಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

ಕಳೆದ 2 ವಾರಗಳಿಂದ ರಾಜ್ಯಾದ್ಯಂತ ವೈರಲ್‌ ಜ್ವರ, ಡೆಂಘೀ, ನ್ಯುಮೋನಿಯ ಕೇಸ್‌ಗಳು ತೀವ್ರವಾಗಿದೆ. ಶೀತ, ಕೆಮ್ಮು, ಮೈ-ಕೈ ನೋವಿನ ಜತೆಗೆ ನಾಲಗೆ ರುಚಿ ಇಲ್ಲದಿರುವ ಲಕ್ಷಣಗಳಿಂದ ಕೂಡಿ ಜ್ವರಗಳು ಬಹಳಷ್ಟು ಜನರನ್ನು ಕಾಡುತ್ತಿದೆ.

ವಾತಾವರಣದಲ್ಲಿ ಬದಲಾವಣೆಯಿಂದಾಗಿ ನ್ಯುಮೋನಿಯಾ,ಫ್ಲೂ ಜ್ವರದ ಕೇಸ್‌ಗಳು ಅಧಿಕವಾಗಿವೆ. ಇನ್ನು ಗಂಟಲು ನೋವಿನಿಂದ ಅತಿಯಾದ ಕೆಮ್ಮು, ಶ್ವಾಸಕೋಶದಲ್ಲಿ ಇನ್‌ಫೆಕ್ಷನ್‌ಗಳಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಪ್ರಕರಣದಲ್ಲೂ ಏರಿಕೆ ಕಂಡು ಬಂದಿದೆ.

ಶೀತ, ಮಳೆ, ಚಳಿ, ಸದಾ ಮೋಡ ಇರುವ ಕಾಲದಲ್ಲಿ ಸಾಮಾನ್ಯವಾಗಿ ಹೊಸ ವೈರಸ್‌ಗಳು ಉತ್ಪತ್ತಿಯಾಗುತ್ತವೆ. ಆಯಾ ವಾತಾವರಣಕ್ಕೆ ಬೇರೆ-ಬೇರೆ ಮಾದರಿಯ ವೈರಸ್‌ಗಳು ಉತ್ಪತ್ತಿಯಾಗುತ್ತಿವೆ. ಪ್ರತಿಕೂಲ ಹವಾಮಾನದಿಂದ ವೈರಸ್‌ಗಳು ಬೇಗ ಒಬ್ಬರಿಂದ ಮತ್ತೂಬ್ಬರ ದೇಹಕ್ಕೆ ಹರಡುತ್ತವೆ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ.

Advertisement

ಸಾಮಾನ್ಯವಾಗಿ ಪ್ರತಿ ವರ್ಷವೂ ಆಗಸ್ಟ್‌ -ಸೆಪ್ಟೆಂಬರ್‌ನಲ್ಲಿ ಡೆಂಘೀ ಹೆಚ್ಚು ಉಲ್ಬಣಗೊಳ್ಳುತ್ತಿತ್ತು. ಆದರೆ, ಆ ಎರಡು ತಿಂಗಳಲ್ಲೂ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಹೆಚ್ಚು ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ.

ಇತ್ತೀಚೆಗೆ ರೆಸ್ಪಿರೇಟರಿ ಸೆನ್ಸಿಟಿಯಲ್‌ ವೈರಸ್‌ 6 ವರ್ಷದ ಕೆಳಗಿನ ಮಕ್ಕಳ ಮೇಲೆ ಅಧಿಕವಾಗಿ ಕಾಡುತ್ತಿವೆ. ಈ ವೈರಸ್‌ನಿಂದ ಶ್ವಾಸನಾಳಗಳಲ್ಲಿ ಉರಿಯೂತ ಉಂಟಾಗಿ ಉಸಿರಾಡಲು ಸಮಸ್ಯೆ ಎದುರಾಗುತ್ತದೆ. ಇದರ ಜತೆಗೆ ಸಾಮಾನ್ಯವಾಗಿ ಚಿಗರೆಯಿಂದ ಬರುವ ರಿಕೆಟೈಲ್ಸ್‌ ಫಿವರ್‌ಗಳ ಪ್ರಮಾಣವೂ ಅಧಿಕವಾಗಿದೆ. ● ಡಾ|ಎನ್‌. ನಿಜಗುಣ, ವೈದ್ಯರು, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ

ಜನರು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?

 ಚಳಿಯಿಂದ ರಕ್ಷಿಸಿಕೊಳ್ಳಲು ದಪ್ಪವಾದ ಸ್ವೆಟರ್‌, ಜರ್ಕಿನ್‌ನಂತಹ ಬೆಚ್ಚಗಿನ ಉಡುಪು ಧರಿಸಿ

 ಶೀತ ಗಾಳಿ ಒಳ ಹೋಗದಂತೆ ಕಿವಿಯನ್ನು ಹತ್ತಿಯಿಂದ ಮುಚ್ಚಿ

 ಪ್ರತಿ ಬಾರಿಯೂ ಕೈಯನ್ನು ಸೋಪಿನಲ್ಲಿ ತೊಳೆದೇ ಆಹಾರ ಸೇವಿಸಿ

 ಮಳೆಯಲ್ಲಿ ನೆನೆಯುವುದರಿಂದ ವೈರಸ್‌ ಗಳು ಉತ್ಪತ್ತಿಯಾಗಿ ಜ್ವರ ಬರಬಹುದು

 ಆದಷ್ಟು ಹೊರಗಿನ ಎಣ್ಣೆಯುಕ್ತ ಪದಾರ್ಥ ಸೇವಿಸಬೇಡಿ

 ಬಿಸಿ ನೀರಿನಲ್ಲಿ ಗಾರ್ಗಲ್‌ ಮಾಡುತ್ತಿರಿ.

 ವೇಸ್ಟ್‌ ಟೈಯರ್‌, ತ್ಯಾಜ್ಯ ಸಂಗ್ರಹದ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ

 ಜ್ವರದ ಲಕ್ಷಣ ಕಂಡು ಬರುವವರು ಆಗಾಗ ಸ್ಟೀಮ್‌ ತೆಗೆದುಕೊಳ್ಳುತ್ತಿರಬೇಕು

 ಜ್ವರ ಬಂದಾಗ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ

 ಮನೆಯಲ್ಲಿ ಒಬ್ಬರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡರೆ ಮಾಸ್ಕ್ ಧರಿಸಿ ಮತ್ತೂಬ್ಬರ ಜತೆ ಅಂತರ ಕಾಯ್ದುಕೊಳ್ಳಿ.

 ಮಕ್ಕಳಿಗೆ ಕೆಮ್ಮು ನೆಗಡಿ ಲಕ್ಷಣಗಳು ಇದ್ದಾಗ ಶಾಲೆಗೆ ಕಳಿಸದೇ ಇರುವುದು ಒಳಿತು

Advertisement

Udayavani is now on Telegram. Click here to join our channel and stay updated with the latest news.

Next