Advertisement

ಮಳೆ ಕಣ್ಣಾಮುಚ್ಚಾಲೆ: ವೈರಲ್‌ ಜ್ವರದ ಆತಂಕ; ಡೆಂಗ್ಯೂ, ಚಿಕನ್‌ಗುನ್ಯಾ ಪ್ರಕರಣಗಳೂ ಹೆಚ್ಚಳ

01:14 AM Jun 04, 2022 | Team Udayavani |

ಮಂಗಳೂರು/ ಉಡುಪಿ: ಕರಾವಳಿಯಲ್ಲಿ ಕೆಲವು ದಿನಗಳಿಂದ ಮಳೆಬಿಸಿಲಿನ ಕಣ್ಣಾಮುಚ್ಚಾಲೆ ನಡೆಯುತ್ತಿದ್ದು, ಡೆಂಗ್ಯೂ ಆತಂಕದ ನಡುವೆ ವೈರಲ್‌ ಶೀತ-ಜ್ವರದ ಭೀತಿ ಎದುರಾಗಿದೆ.

Advertisement

ಮಳೆಗಾಲದ ಆರಂಭದಲ್ಲಿ ಸಾಮಾನ್ಯವಾಗಿ ವೈರಲ್‌ ಜ್ವರ ಕಾಣಿಸಿಕೊಳ್ಳುತ್ತದೆ. ಕರಾವಳಿಯಲ್ಲಿ ಕೆಲವು ದಿನಗಳ ಹಿಂದೆ ಭಾರೀ ಮಳೆಯಾಗಿದ್ದು, ಬಳಿಕ ಬಿಸಿಲು, ಮೋಡ, ಸೆಕೆಯ ವಾತಾವರಣ ಇದೆ. ಈ ಹವಾಮಾನ ವೈಪರೀತ್ಯದ ಪರಿಣಾಮ ಶೀತ -ಜ್ವರ ಕಾಣಿಸಿಕೊಳ್ಳುತ್ತಿದ್ದು, ವೈದ್ಯರ ಬಳಿ ಹೋಗುವವರ ಸಂಖ್ಯೆ ಏರಿದೆ.

ಶೀತ-ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕಿದೆ. ನಿರ್ಲಕ್ಷಿಸಿ ದಿನವ್ಯಯ ಮಾಡಿದರೆ ರೋಗ ಗಂಭೀರತೆ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ನಗರ ಪ್ರದೇಶದ ಜತೆಗೆ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕುಗಳ ಗ್ರಾಮೀಣ ಭಾಗದಲ್ಲಿಯೂ ಜ್ವರದ ಆತಂಕ ಶುರುವಾಗಿದೆ.

ಜ್ವರ ಬಾಧೆಯಿಂದ ತಪ್ಪಿಸಿಕೊಳ್ಳಲು ಜನರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ತಣ್ಣೀರು ಕುಡಿಯಬಾರದು. ಸ್ನಾನಕ್ಕೂ ಬಿಸಿನೀರನ್ನು ಉಪಯೋಗಿಸಬೇಕು. ಶೀತ ಅಧಿಕವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜ್ವರ ಕಡಿಮೆಯಾಗುವ ವರೆಗೆ ತಲೆ ಸ್ನಾನ ಮಾಡದಿರುವುದೇ ಉತ್ತಮ. ನಿತ್ರಾಣ ಪರಿಹರಿಸಲು ಸರಿಯಾಗಿ ಪೌಷ್ಠಿಕಾಂಶಯುಕ್ತ ಆಹಾರ ತೆಗೆದುಕೊಳ್ಳಬೇಕು. ತಂಪು ಪಾನೀಯ ಸೇವನೆ ಬೇಡ. ಉಸಿರಾಟದ ತೊಂದರೆ ಇದ್ದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎನ್ನುತ್ತಾರೆ ವೈದ್ಯರು.

ಡೆಂಗ್ಯೂ ಜ್ವರದ ಆತಂಕ !
ಕಳೆದ ವರ್ಷಕ್ಕೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಡೆಂಗ್ಯೂ ಪ್ರಕರಣಗಳು ಶೇ. 15ರಷ್ಟು ಹೆಚ್ಚಿವೆ. ನೆರೆಯ ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ.

Advertisement

ಸೋಂಕು ತಗಲಿದ ತತ್‌ಕ್ಷಣ ರೋಗ ಲಕ್ಷಣ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ನಾಲ್ಕರಿಂದ ಏಳು ದಿನಗಳ ಬಳಿಕ ಲಕ್ಷಣ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತಲೆನೋವು, ಮೈ ಕೈ ನೋವು, ಕೀಲು ನೋವು, ವಾಕರಿಕೆ, ವಾತ, ಕಣ್ಣುಗಳ ಹಿಂಭಾಗ ನೋವು, ದೇಹದ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಯಾವುದೇ ಜ್ವರ ಇದ್ದರೂ ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹುಮುಖ್ಯ.

ಮುನ್ನೆಚ್ಚರಿಕೆ ಅಗತ್ಯ
– ಹವಾಮಾನ ಬದಲಾವಣೆ ಕಾರಣದಿಂದಾಗಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ
ಕಾಯಿಲೆ ನಿಯಂತ್ರಣಕ್ಕೆ ಜನರೇ ಜಾಗೃತರಾಗ ಬೇಕಿದೆ.
– ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
– ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ಹತ್ತಿರದ ವೈದ್ಯರನ್ನು ಭೇಟಿಯಾಗಿ.
– ಕಿಟಕಿಗಳನ್ನು ಮುಚ್ಚಿ, ಕಿಟಕಿಗೆ ಸೊಳ್ಳೆ ಪರದೆ ಉಪಯೋಗಿಸಿ.
– ನೀರಿನ ಸಂಗ್ರಹಕ್ಕೆ ಭದ್ರವಾದ ಮುಚ್ಚಿದ ವ್ಯವಸ್ಥೆ ಇರಬೇಕು. ಟಯರ್‌, ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಬೇಕು.
– ತೊಟ್ಟಿ, ಡ್ರಮ್‌ಗಳಲ್ಲಿ 2ರಿಂದ 3 ದಿನಗಳಿಗೊಮ್ಮೆ ನೀರು ಬದಲಾಯಿಸಿ ಸ್ವಚ್ಛಗೊಳಿಸಿ.

ಉಡುಪಿ: ಡೆಂಗ್ಯೂ ಇಳಿಮುಖ
ಜಿಲ್ಲೆಯ ಕೊಲ್ಲೂರು, ಮುದ್ದೂರು ಭಾಗದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿ ಕಂಡುಬಂದಿದ್ದು, ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿರುವುದರಿಂದ ನಿಯಂತ್ರಣಕ್ಕೆ ಬಂದಿದೆ. 203 ಪ್ರಕರಣಗಳಲ್ಲಿ 122 ಈ ಪ್ರದೇಶಕ್ಕೆ ಸೇರಿವೆ. ಉಳಿದಂತೆ ಮಲೇರಿಯಾ, ಚಿಕನ್‌ಗುನ್ಯ ಇತ್ಯಾದಿ ಕಡಿಮೆಯಿವೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್‌ ಅವರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಲ್‌ ಫೀವರ್‌ ಜತೆ ಡೆಂಗ್ಯೂ ಪ್ರಕರಣವೂ ಏರಿಕೆ ಕಾಣುತ್ತಿದೆ. ಡೆಂಗ್ಯೂ ಹರಡುವ ಲಾರ್ವಾ ಉತ್ಪತ್ತಿಯಾಗುವುದೇ ನಿಂತಿರುವ ಶುದ್ಧ ನೀರಿನಲ್ಲಿ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 15ರಷ್ಟು ಡೆಂಗ್ಯೂ ಪ್ರಮಾಣ ಏರಿದೆ. ಜನರು ಎಚ್ಚರ ವಹಿಸುವ ಅಗತ್ಯವಿದೆ. ಯಾವುದೇ ಜ್ವರವನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು.
– ಡಾ| ನವೀನ್‌ಚಂದ್ರ ಕುಲಾಲ್‌, ಜಿಲ್ಲಾ ರೋಹವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ. ದ.ಕ.

 

Advertisement

Udayavani is now on Telegram. Click here to join our channel and stay updated with the latest news.

Next