Advertisement

ದಾವಣಗೆರೆ ವಿರಕ್ತ ಮಠ-ಶತಮಾನೋತ್ಸವ ಸಂಗಮ ತಾಣ

11:50 AM Aug 16, 2022 | Team Udayavani |

ಚಿತ್ರದುರ್ಗ ಬೃಹನ್ಮಠದ ಶಾಖಾ ಮಠವಾಗಿರುವ ದಾವಣಗೆರೆಯ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠ ಶತ ಶತಮಾನಗಳಿಂದ ಧಾರ್ಮಿಕ, ಆಧ್ಯಾತ್ಮಿಕ, ಸಮಾಜಮುಖಿಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ.
ವಿರಕ್ತ ಮಠ ಸಮಾಜಕ್ಕೆ ನೀಡಿರುವ ಮತ್ತು ಈಗಲೂ ನೀಡುತ್ತಿರುವ ಕೊಡುಗೆಯೇ ಬಹು ದೊಡ್ಡ ಇತಿಹಾಸ. ಬಸವ ತತ್ವ… ಪ್ರಚಾರದ ಪ್ರಮುಖ ಉದ್ದೇಶದೊಂದಿಗೆ ಚಿತ್ರದುರ್ಗ ಬೃಹನ್ಮಠದ ಶೂನ್ಯಪೀಠಾಧಿಪತಿಗಳಾಗಿದ್ದ ಮುರುಗಿ ಶಾಂತವೀರ ಸ್ವಾಮೀಜಿಯವರ ಶಿಷ್ಯರು, ದಾವಣಗೆರೆಯಲ್ಲೂ ಬಸವ ತತ್ವ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದವರು ನೆಲೆಸಿದ ಹಿನ್ನೆಲೆಯಲ್ಲಿ ವಿರಕ್ತ ಮಠ ಎನ್ನಲಾಗುತ್ತದೆ. ಶತ ಶತಮಾನಗಳಿಂದ ಈಗಲೂ ಬಸವ ತತ್ವ ಪ್ರಚಾರ, ಸಮಾಜ ಮುಖೀ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದೆ. ದಾವಣಗೆರೆಯ ವಿರಕ್ತ ಮಠ ವಿಶ್ವದಲ್ಲೇ ಹಲವಾರು ಪ್ರಥಮಗಳಿಗೆ ಕಾರಣವಾಗಿದೆ. ಹೌದು ವಿರಕ್ತ ಮಠದಲ್ಲಿ ಶತಮಾನಗಳ ಹಿಂದೆ ಪ್ರಾರಂಭವಾಗಿರುವ ಧಾರ್ಮಿಕ ಕಾರ್ಯಗಳು ಈ ಕ್ಷಣಕ್ಕೂ ಮುಂದುವರೆಯುತ್ತಿರುವುದು ಈ ಮಠದ ಧಾರ್ಮಿಕ, ಸಮಾಜಮುಖೀ ಚಿಂತನಾ ಕಾರ್ಯಗಳಿಗೆ ಸಾಕ್ಷಿ.

Advertisement

ಜಯದೇವ ಹಾಸ್ಟೆಲ್‌: 1907 ರಲ್ಲಿ ಬಸವ ಚೇತನ ಶ್ರೀ ಜಯದೇವ ಜಗದ್ಗುರುಗಳ ದೂರದೃಷ್ಟಿಯ ಫಲವಾಗಿ ಪ್ರಾರಂಭವಾಗಿರುವ ಶ್ರೀ ಜಯದೇವ ವಿದ್ಯಾರ್ಥಿ ನಿಲಯ ಶತಮಾನ ಕಂಡಿದ್ದು ಈಗಲೂ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನ, ಆಶ್ರಯ ದಾಸೋಹ ಕೈಂಕರ್ಯದ ತಾಣವಾಗಿದೆ. ಹಿಂದೆ ಶಿಕ್ಷಣ ಪಡೆಯುವುದು ಸರಳ ಮಾತಾಗಿರಲಿಲ್ಲ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಅಕ್ಷರಶಃ ಮರೀಚಿಕೆಯಂತಾಗಿದ್ದ ಕಾಲಘಟ್ಟದಲ್ಲಿ ಜಯದೇವ ಜಗದ್ಗುರುಗಳು ಪ್ರಾರಂಭಿಸಿದ ಪ್ರಪ್ರಥಮ ವಿದ್ಯಾರ್ಥಿ ನಿಲಯ ಮುಂದೆ ನಾಡಿನ ವಿವಿಧ ಭಾಗದಲ್ಲಿ ಹಾಸ್ಟೆಲ್‌ಗ‌ಳ ಆರಂಭಕ್ಕೆ ಕಾರಣವಾಗಿದ್ದು ಇತಿಹಾಸ. ರಾಷ್ಟ್ರಕವಿ ಡಾ| ಜಿ.ಎಸ್‌. ಶಿವರುದ್ರಪ್ಪ ಅವರು ಸಹ ಇದೇ ಹಾಸ್ಟೆಲ್‌ ವಿದ್ಯಾರ್ಥಿ. ಹಾಸ್ಟೆಲ್‌ನಲ್ಲಿದ್ದುಕೊಂಡು ಅಭ್ಯಾಸ ಮಾಡಿದ ಅನೇಕಾನೇಕರು ಈಗ ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಈಗಲೂ ಜಯದೇವ ಹಾಸ್ಟೆಲ್‌ ವಿದ್ಯಾಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡುತ್ತಿದೆ.

ಶ್ರಾವಣ ಮಾಸ ಪ್ರವಚನ: ಶ್ರಾವಣ ಮಾಸದಲ್ಲಿ ಒಳ್ಳೆಯ, ಸದ್ವಿಚಾರಗಳನ್ನು ಕೇಳಬೇಕು ಎಂಬ ಪ್ರತೀತಿಯನ್ನು ಶತಮಾನಗಳ ಹಿಂದೆಯೇ ಕಾರ್ಯರೂಪಕ್ಕೆ ತಂದಿರುವ ಕೀರ್ತಿ ವಿರಕ್ತ ಮಠಕ್ಕೆ ಸಲ್ಲುತ್ತದೆ. ಕರ್ನಾಟಕದ ಗಾಂಧಿ ಎಂದೇ ಕರೆಯಲ್ಪಡುವ ಹರ್ಡೇಕರ್‌ ಮಂಜಪ್ಪ ಅವರು ದಾವಣಗೆರೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವಾಗ ಕೆಲಸದ ನಿಮಿತ್ತ ಮುಂಬೈಗೆ ಹೋಗಿರುತ್ತಾರೆ. ಒಂದು ವಾರ ಕಾಲ ಉಳಿಯಬೇಕಾದ ಸಮಯದಲ್ಲಿ ಅಲ್ಲಿನ ಆರ್ಯ ಸಮಾಜದಲ್ಲಿ ಪ್ರತಿ ದಿನ ಸಂಜೆ ನಡೆಯುತ್ತಿದ್ದ ಆಧ್ಯಾತ್ಮಿಕ ಚಿಂತನೆ, ಭಜನೆ, ಪ್ರವಚನ ಕೇಳಿ ದಾವಣಗೆರೆ ಯಲ್ಲೂ ಯಾಕೆ ಈ ರೀತಿಯ ಕಾರ್ಯಕ್ರಮ ನಡೆಸಬಾರದು ಎಂದು ದಾವಣಗೆರೆಗೆ ವಾಪಾಸ್‌ ಬಂದ ನಂತರ ಸಂಗೀತ ಶಿಕ್ಷಕರಾಗಿದ್ದ ನಿಡಗುಂದಿ ಮಡಿವಾಳಪ್ಪ ಅವರಲ್ಲಿ ಪ್ರಸ್ತಾಪಿಸುತ್ತಾರೆ. ಅವರ ಸಲಹೆಯಂತೆ ವಿರಕ್ತ ಮಠದ ಚರಮೂರ್ತಿಗಳಾಗಿದ್ದ ಮೃತ್ಯುಂಜಯ ಅಪ್ಪ ಅವರಲ್ಲಿ ಕೇಳಿದಾಗ ಸಂತೋಷದಿಂದಲೇ ಒಪ್ಪುತ್ತಾರೆ. ಭಜನೆ, ಪುರಾಣ ಪ್ರಾರಂಭವಾಗುತ್ತದೆ. 1911 ರ ಜೂ. 26 ರಂದು ಭಜನಾ ಸಂಘ ಪ್ರಾರಂಭವಾಯಿತು. ಅದೇ ವರ್ಷ ಶ್ರಾವಣದಲ್ಲಿ ಶ್ರಾವಣ ಮಾಸೋಪನ್ಯಾಸ ಮಾಲೆ… ಪ್ರಾರಂಭಿಸಿ ಪ್ರತಿ ಶ್ರಾವಣದಲ್ಲಿ ಸಂಜೆ ಪುರಾಣ, ಭಜನೆ ಇತರೆ ನಡೆಸಲಾಗುತ್ತಿದೆ. ಶತಮಾನ ಕಳೆದರೂ ಈಗಲೂ ಪ್ರತಿ ಶ್ರಾವಣ ಮಾಸದಲ್ಲಿ ವಿರಕ್ತ ಮಠದಲ್ಲಿ ಪ್ರವಚನ ನಡೆಯುತ್ತಿದೆ. ಡಾ| ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ ಪೀಠಕ್ಕೆ ಬಂದ ನಂತರ ಕಳೆದ 30 ವರ್ಷಗಳಿಂದ ಪ್ರವಚನ ನಡೆಯುತ್ತಿದೆ. ಪ್ರತಿ ಶ್ರಾವಣ ಮಾಸದ ಪ್ರವಚನದ ಮುಕ್ತಾಯ ಸಮಾರಂಭ ಶ್ರಾವಣ ಮಂಗಲದಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸುವುದು ವಿಶೇಷ.

ಬಸವ ಪ್ರಭಾತ್‌ಪೇರಿ: ದಾವಣಗೆರೆಯ ವಿರಕ್ತ ಮಠದಲ್ಲಿ 1917 ರಲ್ಲಿ ಪ್ರಾರಂಭವಾದ ಬಸವ ಪ್ರಭಾತ್‌ ಪೇರಿಗೆ ಶತಮಾನದ ಇತಿಹಾಸ ಇದೆ. ಬಸವ ಜಯಂತಿ ಆರಂಭದ ಮುನ್ನ ಪ್ರತಿ ದಿನ ದಾವಣಗೆರೆಯ ವಿವಿಧ ಭಾಗದಲ್ಲಿ ಸಂಚರಿಸಿ ಬಸವ ತತ್ವಗಳ ಪ್ರಚಾರ ಮಾಡುವ ಉದ್ದೇಶದಿಂದ ಬಸವ ಪ್ರಭಾತ್‌ಪೇರಿ ಪ್ರಾರಂಭಿಸಲಾಯಿತು. ಈಗಲೂ ಯಾವುದೇ ಚ್ಯುತಿ ಬಾರದಂತೆ ಅನೂಚಾನವಾಗಿ ಬಸವ ಪ್ರಭಾತ್‌ ಪೇರಿ ನಡೆಸಲಾಗುತ್ತಿದೆ. ಶ್ರೀ ಬಸವ ಪ್ರಭು ಸ್ವಾಮೀಜಿಯವರು ವಿರಕ್ತ ಮಠಕ್ಕೆ ಬಂದ ನಂತರದಲ್ಲಿ ಬಸವ ಪ್ರಭಾತ್‌ ಪೇರಿ ಸಂದರ್ಭದಲ್ಲಿ “ಜಯದೇವ ಜೋಳಿಗೆ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಂಡು ವ್ಯಸನದಿಂದ ಹೊರ ಬರುವಂತೆ ಜಾಗೃತಿ ಮೂಡಿಸುವ ಕಾರ್ಯದ ಫಲವಾಗಿ ಅನೇಕರು ದುಶ್ಚಟಗಳ ತ್ಯಜಿಸಿ, ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.

ಶತಮಾನೋತ್ಸವ: ಶಿವಯೋಗಿಗಳ ಇತಿಹಾಸದಲ್ಲಿ ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು ಅಗ್ರಗಣ್ಯರು. ತಮ್ಮ ದಿವ್ಯ ದೃಷ್ಟಿಯಿಂದಲೇ ಜಯದೇವ ಜಗದ್ಗುರುಗಳವರಿಗೆ ಆಶೀರ್ವಾದ ಮಾಡಿದಂತಹ ಮಹಾನ್‌ ಶಿವಯೋಗಿಗಳು. ಅಂತಹ ಅಥಣಿ ಶಿವಯೋಗಿಗಳ ತೋರುಗದ್ದುಗೆ ದಾವಣಗೆರೆಯ ಶಿವಯೋಗಿ ಮಂದಿರದಲ್ಲಿದೆ. ಅಥಣಿ ಶಿವಯೋಗಿಗಳ ಕಾರಣದಿಂದಲೇ ಶಿವಯೋಗಿ ಮಂದಿರ ಎಂದು ಕರೆಯಲ್ಪಡುವ ಮಂದಿರದಲ್ಲಿ 1922 ರಲ್ಲಿ ಅಥಣಿ ಶಿವಯೋಗಿಗಳ ಸ್ಮರಣೋತ್ಸವ ಪ್ರಾರಂಭವಾಯಿತು. 2022 ರಲ್ಲಿ ಲಿಂಗೈಕ್ಯ ಶ್ರೀಗಳ ಸ್ಮರಣೋತ್ಸವಕ್ಕೆ ಒಂದು ನೂರು ವರ್ಷ ತುಂಬಿದೆ. ಕಳೆದ ಜುಲೈನಲ್ಲಿ ಅಥಣಿ ಶಿವಯೋಗಿಗಳ ಲಿಂಗೈಕ್ಯ ಸ್ಮರಣೋತ್ಸವದ ಶತಮಾನೋತ್ಸವವೂ ನಡೆದಿದೆ.

Advertisement

ಬಸವ ಜಯಂತಿ ಪ್ರಾರಂಭ
ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಸಾರ್ವತ್ರಿಕವಾಗಿ ಬಸವ ಜಯಂತಿ ಪ್ರಾರಂಭಿಸಿದ ಕೀರ್ತಿ ದಾವಣಗೆರೆ ವಿರಕ್ತ ಮಠಕ್ಕೆ ಸಲ್ಲುತ್ತದೆ. ಶ್ರಾವಣ ಮಾಸ ಒಳಗೊಂಡಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಉಪನ್ಯಾಸ, ಸಂವಾದ ನಡೆಯುತ್ತಿತ್ತು. ಇದನ್ನು ಗಮನಿಸಿದ ಹಡೇìಕರ್‌ ಮಂಜಪ್ಪ ಅವರು 12 ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿ ಉಂಟು ಮಾಡಿದ ಬಸವಣ್ಣನವರ ಜಯಂತಿಯನ್ನು ಏಕೆ ಸಾರ್ವಜನಿಕವಾಗಿ ಆಚರಣೆ ಮಾಡಬಾರದು ಎಂದು ಆಲೋಚಿಸಿ ಮೃತ್ಯುಂಜಯ ಅಪ್ಪ ಅವರಲ್ಲಿ ಭಿನ್ನಹ ಮಂಡಿಸುತ್ತಾರೆ. ಅವರು ಜಯದೇವ ಜಗದ್ಗುರುಗಳ ಗಮನಕ್ಕೆ ತಂದಾಗ ಬಸವ ಜಯಂತಿ ಆಚರಣೆಗೆ ಒಪ್ಪಿಗೆ ದೊರೆಯುತ್ತದೆ. 1913 ರಲ್ಲಿ ಮೊಟ್ಟ ಮೊದಲ ಬಾರಿಗೆ ವಿರಕ್ತ ಮಠದಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣೆ ಪ್ರಾರಂಭವಾಯಿತು. ನಂತರ ಇಡೀ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿದೆ. ಈಗ ವಿರಕ್ತ ಮಠದಲ್ಲೂ ಬಸವ ಜಯಂತಿಯನ್ನು ವಿವಿಧ ಸ್ಪರ್ಧೆ, ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ.

-ರಾ. ರವಿಬಾಬು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next