Advertisement
ನಾನು ಕ್ರಿಕೆಟನ್ನು ಆರಿಸಿಕೊಂಡೆ ಅನ್ನುವು ದಕ್ಕಿಂತಲೂ ಕ್ರಿಕೆಟ್ ನನ್ನನ್ನು ಆಯ್ಕೆ ಮಾಡಿ ಕೊಂಡಿತು ಅನ್ನುವುದೇ ಹೆಚ್ಚು ಸೂಕ್ತ. ನನ್ನ ಬಾಲ್ಯ ಎಂದರೆ ಸ್ಮರಣೆಗೆ ಬರುವುದು ಬ್ಯಾಟ್ ಹಿಡಿದಿರುತ್ತಿದ್ದ ದಿನಗಳು. ನಾನು ಆಡುತ್ತಿದ್ದ ಆಟ ಅದೊಂದೇ. ತಂದೆ ತಾಯಿಗೆ ನಾನು ಮೂರನೆಯ ಮಗ. ಹಾಗಾಗಿ ಓದು, ಬರಿ, ಮಾರ್ಕ್ ತೆಗಿ ಅಂತ ನನ್ನ ಮೇಲೆ ಹೆಚ್ಚೇನೂ ಒತ್ತಡ ಇರಲಿಲ್ಲ. ಹಾಗೆಯೇ ನಾನೇ ಕೊನೆಯ ಮಗನಾದ್ದರಿಂದ ನನ್ನ ಮೇಲೆ ಹೆಚ್ಚು ಅಕ್ಕರೆಯೂ ಇತ್ತು, ಅದರ ಪ್ರಯೋಜನವನ್ನು ಪಡೆದುಕೊಂಡೆ. ನನ್ನ ಗೆಳೆಯರಿಗಿಂತ ನಾನೇ ಹೆಚ್ಚು ಕ್ರಿಕೆಟ್ ಆಡುತ್ತಿದ್ದೆ. ಅವರೆಲ್ಲ ಅವರವರ ಮನೆಗಳಲ್ಲಿ ಮೊದಲ ಅಥವಾ ಎರಡನೆಯ ಮಕ್ಕಳಾಗಿದ್ದರು. ಮೊದಲ ಅಥವಾ ಕೊನೆಯ ಮಗನಾಗುವುದು ಪ್ರೀತಿ, ನಿರೀಕ್ಷೆ, ಜವಾಬ್ದಾರಿಗಳ ವಿಚಾರದಲ್ಲಿ ಭಾರತದಲ್ಲಿ ಭಾರೀ ವ್ಯತ್ಯಾಸ ಉಂಟು ಮಾಡುತ್ತದೆ. ಕೊನೆಯ ಮಗನಾದ್ದರಿಂದ ನನ್ನ ಪಾಡಿಗೆ ನಾನು ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವುದು ಸಾಧ್ಯವಾಯಿತು.
12 ವರ್ಷ ವಯಸ್ಸಿನವನಾಗಿದ್ದಾಗ ಸಚಿನ್ ತೆಂಡೂಲ್ಕರ್ ಅವರ ಜತೆಗೆ ಮೊದಲ ಭೇಟಿ ಸಂಭವಿಸಿತು. ಅಂಡರ್ 19 ಕ್ರಿಕೆಟ್ ತಂಡದ ಸದಸ್ಯನಾಗಿದ್ದೆ, ನ್ಯೂಝಿಲಂಡ್ ಟೂರ್‌ಗೆ ಮುನ್ನ ಸಚಿನ್ ಭೇಟಿ ನಿಗದಿಯಾಗಿತ್ತು. ಸಚಿನ್ ಏನು ಮಾತಾಡಿದರು ಎಂಬುದು ಒಂದಕ್ಷರ ನೆನಪಿಲ್ಲ, ಅವರನ್ನು ಪ್ರತ್ಯಕ್ಷ ನೋಡಿ ದಂಗುಬಡಿದು ಹೋಗಿದ್ದೆ. ಯಾರಿಂದ ಸ್ಫೂರ್ತಿ ಪಡೆದು ಈ ಆಟವನ್ನು ಆಡಲು ಆರಂಭಿಸಿದೆನೋ ಅವರೇ ಎದುರು ನಿಂತಾಗ ಆಗುವ ಅನುಭವವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ!
Related Articles
Advertisement
ಅಭಿಮಾನಿಗಳ ವಿರುದ್ಧ ಹೋರಾಟ!ಅಭಿಮಾನಿಗಳ ಮೇರೆ ಮೀರಿದ ಅಭಿಮಾನ ಪ್ರದರ್ಶನವೇ ನನ್ನಂತಹ ಕ್ರಿಕೆಟಿಗರಿಗೆ ಬಹಳ ದೊಡ್ಡ ಸಮಸ್ಯೆ. ಆರಂಭದಲ್ಲಿ ಅದರ ವಿರುದ್ಧ ಸಿಟ್ಟಿಗೇಳುತ್ತಿದ್ದೆ. ಈ ದೇಶದ ಬಹಳ ದೊಡ್ಡ ಸಮಸ್ಯೆ ಅಂದರೆ ಹೋಲಿಕೆ ಮಾಡುವುದು. ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಲು ಆರಂಭಿಸಿದಾಕ್ಷಣ ಸಚಿನ್ ಜತೆಗೆ ನನ್ನನ್ನು ತುಲನೆ ಮಾಡಲಾರಂಭಿಸಿದರು. ಸಚಿನ್ ರೆಕಾರ್ಡ್‌ಗಳನ್ನು ಮುರಿಯಲು ನಾನು ಶಕ್ತನೇ ಅಲ್ಲವೇ ಎಂಬ ಚರ್ಚೆ ಆರಂಭಿಸಿದರು. ಇಂತಹ ಸಂದರ್ಭಗಳಲ್ಲಿ ನನ್ನೊಳಗೆ ಮೂಡುವ ಪ್ರಶ್ನೆ – ನನ್ನೊಬ್ಬನ ಬಗೆಗಷ್ಟೇ ಏಕೆ ಇಷ್ಟು ಆಸಕ್ತಿ, ತಂಡದಲ್ಲಿ ಇನ್ನೂ ಹತ್ತು ಮಂದಿ ಇದ್ದಾರಲ್ಲ? ನನ್ನಿಂದ ತಾವೇನನ್ನು ಬಯಸುತ್ತಿದ್ದೇವೆ, ನಾನು ಹೇಗೆ ಆಡಬೇಕು ಎಂದು ತಾವು ಇಚ್ಛಿಸುತ್ತೇವೆ ಎಂಬುದನ್ನು ಹೇಗಾದರೂ ನನ್ನ ಕಿವಿಗೆ ಹಾಕಬೇಕು ಎಂಬ ತುಡಿತ ಅಭಿಮಾನಿ ಗಳಲ್ಲಿರುತ್ತದೆ. ನಾನು ಬೌಂಡರಿ ಲೈನ್ ಬಳಿ ನಿಂತಿದ್ದರೆ ಸೆಂಚುರಿ ಬಾರಿಸು ಎಂದು ಕೂಗುತ್ತಿರುತ್ತಾರೆ. ಆದರೆ, ಕಾಲ ಕಳೆದಂತೆ ಅವರು ಏನನ್ನು ಬಯಸುತ್ತಾರೆಯೋ ಅದನ್ನು ನಾನಾಗಿಯೇ ಒದಗಿಸುತ್ತ ಹೋಗುತ್ತಿದ್ದೇನೆ ಎಂಬುದನ್ನು ಕಂಡುಕೊಂಡೆ. ಅಭಿಮಾನದ ಹುಚ್ಚು ಹೊಳೆ ಭಾರತೀಯ ಕ್ರಿಕೆಟರ್‌ನ ಬದುಕಿನ ಅವಿಭಾಜ್ಯ ಅಂಗ. ನಾವು ಅದರಿಂದ ದೂರ ಓಡಿಹೋಗಲು ಪ್ರಯತ್ನಿಸಿದರೆ ಅದು ಅಟ್ಟಿಸಿಕೊಂಡು ಬರುತ್ತದೆ. ಮೊಹಾಲಿಯಲ್ಲಿ ವರ್ಲ್ಡ್ ಟಿ20 ಮ್ಯಾಚಿನ ಬಳಿಕ ನಡೆದ ಘಟನೆ ನನಗಿನ್ನೂ ನೆನಪಿದೆ. ಏರ್‌ಪೋರ್ಟಿಂದ ಹೊರಬರುವಾಗ ಅಭಿಮಾನಿ ನೇರ ನನ್ನ ಮುಂದೆ ನಿಂತು ‘ನಿಮ್ಮ ಕೈಗಳನ್ನು ತೋರಿಸಿ’ ಅಂದ. ನಾನು ಕೈ ಮುಂಚಾಚಿದೆ. ಆತ ಅದನ್ನು ಹಿಡಿದು ತನ್ನ ದೇಹದಲ್ಲೇನೋ ವಿದ್ಯುತ್ಪ್ರವಾಹ ಹರಿಯುತ್ತಿರುವಂತೆ ವರ್ತಿಸಿದ. ನಾನೊಬ್ಬ ಸೂಪರ್ ಮ್ಯಾನ್ ಎಂದು ಆತ ಭಾವಿಸಿದ್ದಾನೇನೋ, ನನಗೆ ಸತ್ತುಹೋಗುವಷ್ಟು ಮುಜುಗರವಾಯಿತು. ಈಗ ನಿಧಾನವಾಗಿ ಅಭಿಮಾನಿಗಳ ಪ್ರೀತಿಯ ಅಭಿವ್ಯಕ್ತಿಯ ಈ ಬಗೆಯನ್ನು ಸ್ವೀಕರಿಸಲು ಕಲಿತಿದ್ದೇನೆ. ಅಭಿಮಾನಿಗಳು ನನ್ನನ್ನು ಪ್ರೀತಿಸುತ್ತಾರೆ, ನಾನು ಚೆನ್ನಾಗಿ ಆಡಬೇಕು ಎನ್ನುವುದು ಅವರ ಬಯಕೆ. ಅವರದನ್ನು ವ್ಯಕ್ತಪಡಿಸುವುದು ಹೀಗೆ ಅತಿರೇಕ ಪ್ರದರ್ಶನಗಳ ಮೂಲಕ ಅಷ್ಟೆ. ಇನ್ನೊಂದು ಹತ್ತು ಹನ್ನೆರಡು ವರ್ಷಗಳ ಕಾಲ ನಾನಿದನ್ನು ಸಹಿಸಿಕೊಳ್ಳಬೇಕಾಗಬಹುದು. ಆ ಹೊತ್ತಿಗೆ ಇನ್ನೊಬ್ಬ ಸಾಧಕ ಕ್ರಿಕೆಟಿಗರ್ಯಾರಾದರೂ ಉದಯಿಸಿರುತ್ತಾರೆ. ಜನರ ಅಭಿಮಾನ ಅವರ ಹಿಂದೆ ಹೋಗುತ್ತದೆ. ಆ ತನಕ ನಾನು ಈ ಅಭಿಮಾನದ ಹುಚ್ಚು ಹೊಳೆಯಲ್ಲಿ ತೇಲಿ ಹೋಗದೆ, ನಾನು ನಾನಾಗಿಯೇ ಇರುವಂತೆ ನೋಡಿಕೊಳ್ಳಬೇಕಿದೆ. ಬೇಕಾಗಿದೆ – ಒಂದು ಕ್ಷಣ ಏಕಾಂತ
ಅಭಿಮಾನದ ಈ ಹುಚ್ಚು ಹೊಳೆಯಿಂದಾಗಿ ಭಾರತದಲ್ಲಂತೂ ಎಲ್ಲೇ ಆಗಲಿ, ಒಂದಿಷ್ಟು ಸುತ್ತಾಡಿ ಬರೋಣ ಎಂದರೆ ಅಸಾಧ್ಯ ಎಂಬಂತಾಗಿದೆ. ಎಲ್ಲಾದರೂ ಹೊರಟರೆ ಸೆಕ್ಯುರಿಟಿ ಬೇಕೇ ಬೇಕು. ವಿದೇಶಗಳಿಗೆ ಹೋದಾಗ ನನ್ನಷ್ಟಕ್ಕೆ ನಾನು ಒಬ್ಬಂಟಿಯಾಗಿ ಸುತ್ತಾಡಿ ಬರುವುದು ಸಾಧ್ಯವಾಗುತ್ತದೆ. ಕ್ರಿಕೆಟ್ ಆಡುವ ದೇಶಗಳಲ್ಲಿ ಕೂಡ ನನ್ನನ್ನು ಗುರುತಿಸಿದವರು ಕೈಬೀಸಿ ಹೋಗಿಬಿಡುತ್ತಾರೆ. ನಮ್ಮ ವೈಯಕ್ತಿಕ ಆವರಣದೊಳಗೆ ಯಾರೂ ಪ್ರವೇಶಿಸುವುದಿಲ್ಲ. ಗೊತ್ತು ಗುರಿಯಿಲ್ಲದೆ ಏಕಾಂಗಿಯಾಗಿ ನಡೆಯುವುದು ಅಲ್ಲಿ ಮಾತ್ರ ಸಾಧ್ಯ. ನಾನು ಅಂಥ ಏಕಾಂತ ವನ್ನು ಪ್ರೀತಿಸುತ್ತೇನೆ. ನನ್ನಷ್ಟಕ್ಕೆ ನಾನು ಹಾಗೆ ಗೊತ್ತು ಗುರಿಯಿಲ್ಲದೆ ಹಾಡು ಕೇಳುತ್ತ ಅಲೆದಾಡುವುದು ವಿದೇಶಗಳಿಗೆ ಹೋದಾಗ ಮಿಸ್ ಮಾಡದೆ ಪಡೆಯುವ ಅತ್ಯಪೂರ್ವ ಅನುಭವ. ಎಲ್ಲೆಡೆಯೂ ಗೆಲ್ಲಬೇಕು
ಮಾಜಿ ಕೋಚ್ ಡಂಕನ್ ಫ್ಲೆಚರ್ ಒಮ್ಮೆ ಹೇಳಿದ್ದರು, “ವೃತ್ತಿಪರ ಆಟಗಳಲ್ಲಿಯೇ ಕ್ರಿಕೆಟ್ ಅತ್ಯಂತ ವೃತ್ತಿಪರವಲ್ಲದ ಆಟ”. ಕ್ರಿಕೆಟಿಗರು ಸಾಮಾನ್ಯವಾಗಿ ತಮ್ಮಲ್ಲಿ ಆಟದ ಕೌಶಲ ಇದ್ದರೆ ಸಾಕು ಎಂದುಕೊಳ್ಳುತ್ತಾರೆ. ತಾನು ಟೆನಿಸಿಗ ಅಥವಾ ಫುಟ್ಬಾಲಿಗನಷ್ಟು ದೈಹಿಕ ಫಿಟ್ನೆಸ್ ಕಾಯ್ದುಕೊಳ್ಳಬೇಕು, ತರಬೇತಿ ನಿರಂತರವಾಗಿರಬೇಕು ಎಂದು ಅರ್ಥಮಾಡಿಕೊಳ್ಳುವುದೇ ಇಲ್ಲ. ಈ ಕಾಲಘಟ್ಟದಲ್ಲಿ ಕ್ರಿಕೆಟಿನ ಮೂರೂ ಆವೃತ್ತಿಗಳಲ್ಲಿ ಉನ್ನತ ಶ್ರೇಣಿಯನ್ನು ಕಾಯ್ದುಕೊಳ್ಳಬೇಕೆಂದರೆ ತರಬೇತಿ, ಫಿಟ್ನೆಸನ್ನು ನಿತ್ಯಮಂತ್ರ ಮಾಡಿಕೊಳ್ಳಬೇಕು ಎಂಬುದನ್ನು ನಾನು ಬಹಳ ಬೇಗ ಅರ್ಥ ಮಾಡಿಕೊಂಡೆ. ನಮ್ಮ ವ್ಯಾಯಾಮ ಕ್ರಮ, ಆಹಾರ ಕ್ರಮ, ತರಬೇತಿ ಎಲ್ಲವೂ ವ್ಯವಸ್ಥಿತವಾಗಿದ್ದರಷ್ಟೇ ಫಿಟ್ ಆಗಿರುವುದು ಸಾಧ್ಯ, ಆಗಲೇ ಮಾನಸಿಕವಾಗಿಯೂ ಸದೃಢರಾಗಿರುವುದು ಸಾಧ್ಯ. 2012ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೆನ್ನಾದ ಪ್ರದರ್ಶನ ನೀಡಿದ್ದೆ, ಬಾಂಗ್ಲಾ ವಿರುದ್ಧ 180 ರನ್ ಬಾರಿಸಿದ್ದೆ. ಅದನ್ನೇ ತಲೆಯಲ್ಲಿ ಇರಿಸಿಕೊಂಡು ಐಪಿಎಲ್ ಆಡಲು ಇಳಿದೆ. ಆದರೆ ಎಲ್ಲವೂ ತಲೆಕೆಳಗಾಯಿತು. ಆ ದಿನಗಳಲ್ಲಿ ನನ್ನ ಪ್ರ್ಯಾಕ್ಟೀಸ್ ಏನೇನೂ ಚೆನ್ನಾಗಿರಲಿಲ್ಲ. ರುಚಿ ಕಂಡದ್ದನ್ನು ಮುಕ್ಕುತ್ತಿದ್ದೆ. ಬೆಳಗ್ಗೆ ಬಹಳ ತಡವಾಗಿ ಏಳುತ್ತಿದ್ದೆ. ಆಗಿನದ್ದು ಒಂದು ವಿಚಿತ್ರ ಮನಸ್ಥಿತಿ. ಹೇಗೋ ಐಪಿಎಲ್ ಸೀಸನ್ ಮುಗಿಯಿತು. ಮನೆಗೆ ಹೋದೆ. ಚೆನ್ನಾಗಿ ತಣ್ಣೀರು ಸ್ನಾನ ಮಾಡಿ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಂಡೆ. ನನಗೆ ನಾನೇ ಹೇಳಿಕೊಂಡೆ, ‘ವೃತ್ತಿಪರ ಕ್ರಿಕೆಟಿಗನಾಗಿ ಉಳಿಯಬೇಕಾದರೆ ನೀನು ಹೀಗಿರಬಾರದು’. ಮರುದಿನದಿಂದಲೇ ಎಲ್ಲವನ್ನೂ ಬದಲಾಯಿತು. ಪ್ರತಿದಿನ ಒಂದೂವರೆ ತಾಸು ಜಿಮ್. ತಂಪು ಪಾನೀಯ, ಐಸ್‌ಕ್ರೀಮ್, ಸಿಹಿ ತಿನಿಸು ಎಲ್ಲಕ್ಕೂ ವಿದಾಯ. ನಿರಂತರ ಪ್ರ್ಯಾಕ್ಟೀಸ್. ಎರಡು ತಿಂಗಳ ಕಾಲ ರಾತ್ರಿ ಹಸಿವಾಗಿ ನಿದ್ದೆ ಬರುತ್ತಿರಲಿಲ್ಲ. ಎಲ್ಲವನ್ನೂ ಸಹಿಸಿಕೊಂಡದ್ದರಿಂದಲೇ ಬಹಳ ಬೇಗನೆ ಪರಿಣಾಮ ಕಾಣಿಸಲು ಶುರುವಾಯಿತು. ಮೈದಾನದಲ್ಲಿ ಚುರುಕಾದೆ. ಬೆಳಗ್ಗೆ ಬೇಗನೆ ಎದ್ದಾಗ ನನ್ನೊಳಗಿಡೀ ಶಕ್ತಿ ಉಕ್ಕಿಹರಿಯುವಂತೆ ಭಾಸವಾಗುತ್ತಿತ್ತು. 2015ರಲ್ಲಿ ವ್ಯಾಯಾಮವನ್ನು ಮತ್ತಷ್ಟು ಕಠಿನಗೊಳಿಸಿದೆ. ಕಳೆದ ಒಂದೂವರೆ – ಎರಡು ವರ್ಷಗಳಿಂದ ಅದು ನನ್ನ ಆಟವನ್ನು ಇನ್ನೊಂದು ಸ್ತರಕ್ಕೆ ಒಯ್ದಿದೆ. – ವಿರಾಟ್ ಕೊಹ್ಲಿ, ಭಾರತೀಯ ಕ್ರಿಕೆಟ್ ತಂಡದ ನಾಯಕ