ವಾಷಿಂಗ್ಟನ್/ಮಿನ್ನಿಯಾಪೊಲೀಸ್:ಕಪ್ಪು ವರ್ಣೀಯ ಸಮುದಾಯದ ವ್ಯಕ್ತಿಯ ಸಾವಿಗೆ ನ್ಯಾಯ ಕೋರಿ ನಡೆಯುತ್ತಿದ್ದ ಪ್ರತಿಭಟನೆ ಇದೀಗ ಆರನೇ ದಿನಕ್ಕೆ ಕಾಲಿಟ್ಟಿದ್ದು ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಹಿಂಸೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಸುಮಾರು 40 ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ವಿವಿಧ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಶ್ವೇತಭವನದ ಮುಂಭಾಗದವರೆಗೂ ತಲುಪಿದ್ದು, ಪ್ರತಿಭಟನಾಕಾರರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆ ಕೂಗಿದ್ದರು. ಅಷ್ಟೇ ಅಲ್ಲ ಮುಂಜಾಗ್ರತಾ ಕ್ರಮವಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಬಲವಂತವಾಗಿ ಶ್ವೇತಭವನದಲ್ಲಿನ ರಹಸ್ಯ ಬಂಕರ್ ನಲ್ಲಿ ಆಶ್ರಯ ಪಡೆಯಲು ಭದ್ರತಾ ಸಿಬ್ಬಂದಿಗಳು ಕಳುಹಿಸಿರುವ ಘಟನೆ ನಡೆದಿರುವುದಾಗಿ ವರದಿ ಹೇಳಿದೆ.
ಕಳೆದ ಸೋಮವಾರ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುವಾಗ ಜಾರ್ಜ್ ಫ್ಲಾಯ್ಡ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬ ತನ್ನ ಮೊಣಕಾಲಿನಿಂದ ಕುತ್ತಿಗೆಯನ್ನು ಬಲವಾಗಿ ಒತ್ತಿದ್ದರಿಂದ ಫ್ಲಾಯ್ಡ್ ಮೃತಪಟ್ಟಿದ್ದ. ಈ ಘಟನೆ ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಾರಂಭಿಸಿತ್ತು ಎಂದು ವರದಿ ತಿಳಿಸಿದೆ.
ಅಮೆರಿಕದ ಒಂದು ದಶಕದಲ್ಲಿಯೇ ಕಂಡು ಕೇಳರಿಯದ ರೀತಿಯ ನಾಗರಿಕ ಅರಾಜಕತೆ, ಹಿಂಸಾಚಾರ ತಲೆದೋರಿದೆ. ಫ್ಲಾಯ್ಡ್ ಸಾವಿನ ಬಳಿಕ ಅಮೆರಿಕದ 140 ನಗರಗಳಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿ ಉರಿಯತೊಡಗಿದೆ. ಈವರೆಗೆ ನಡೆದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದರು, 2564 ಮಂದಿಯನ್ನು
ಬಂಧಿಸಲಾಗಿದೆ ಎಂದು ವರದಿ ಹೇಳಿದೆ.