ಪುಣೆ: ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ ಸ್ಮರಣಾರ್ಥ ಸೋಮವಾರ ಆಯೋಜಿಸಿದ್ದ 200ನೇ ವಿಜಯೋತ್ಸವದಲ್ಲಿ ಲಕ್ಷಾಂತರ ದಲಿತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದಲಿತರು ಮತ್ತು ಮರಾಠ ಗುಂಪುಗಳ ನಡುವೆ ನಡೆದ ಸಂಘರ್ಷದಲ್ಲಿ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಓರ್ವ ದಲಿತ ಯುವಕ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಭೀಮಾ ಕೋರೆಗಾಂವ್ ನಲ್ಲಿನ ವಿಜಯ್ ಸ್ತಂಭ ಬಳಿ ನಡೆದ ಬೃಹತ್ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದ್ದು, ಈ ಕಲ್ಲು ತೂರಾಟ ನೆರೆಯ ಗ್ರಾಮಗಳಲ್ಲಿ ಸಂಭವಿಸಿದೆ ಎಂದು ವರದಿ ಹೇಳಿದೆ.
1818 ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಪೇಶ್ವೆ ಸೇನೆಯನ್ನು ಸೋಲಿಸಿತ್ತು. ಇದರ ಸ್ಮರಣಾರ್ಥ 200ನೇ ವಿಜಯೋತ್ಸವ ಪುಣೆಯಲ್ಲಿ ಆಯೋಜಿಸಲಾಗಿತ್ತು, ಸುಮಾರು 5 ಲಕ್ಷ ದಲಿತರು ಭಾಗವಹಿಸಿದ್ದರು ಎಂದು ವರದಿ ವಿವರಿಸಿದೆ.
ಶಿರೂರ್ ಗ್ರಾಮದಲ್ಲಿ ಕಲ್ಲುತೂರಾಟ ನಡೆದಿದ್ದು, ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಯುದ್ಧ ಸ್ಮಾರಕದತ್ತ ತೆರಳುತ್ತಿದ್ದ ವೇಳೆ ಕೆಲವು ಸ್ಥಳೀಯರಿಗೆ ಹಾಗೂ ಸಂಘಟನೆಯ ಕೆಲವು ಸದಸ್ಯರ ನಡುವೆ ಹೊಯ್, ಕೈ ಆರಂಭವಾಗುವ ಮೂಲಕ ಹಿಂಸಾಚಾರ ಆರಂಭವಾಗಿರುವುದಾಗಿ ವರದಿ ತಿಳಿಸಿದೆ.
ಘಟನೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಧ್ಯಪ್ರವೇಶಿಸುವ ಮೂಲಕ ತನಿಖೆಯನ್ನು ನಡೆಸಬೇಕೆಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಗ್ರಹಿಸಿದ್ದಾರೆ. ಅಲ್ಲದೇ ದಲಿತರ ಕಾರ್ಯಕ್ರಮಕ್ಕೆ ಪೊಲೀಸರ ಭದ್ರತೆ ಒದಗಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.