Advertisement

ಹಿಂದೂ ಕಾರ್ಯಕರ್ತರಿಗೆ ಠಾಣೆಯಲ್ಲಿ ಹಿಂಸೆ: ಆರೋಪ

10:13 AM Dec 28, 2017 | Team Udayavani |

ಪುತ್ತೂರು: ಗ್ರಾಮಾಂತರ ಠಾಣೆ ಪೊಲೀಸರ ದೌರ್ಜನ್ಯ ಖಂಡಿಸಿ ಪುತ್ತೂರು ಮಿನಿ ವಿಧಾನಸೌಧ ಮುಂಭಾಗದಲ್ಲಿ ಮಂಗಳವಾರ ಆರಂಭಗೊಂಡ ಪ್ರತಿಭಟನೆ, ಬುಧವಾರವೂ ಮುಂದುವರಿದಿದೆ.

Advertisement

ಕಡಬ ವಿಭಾಗ ಸಂಚಾಲಕ ರವಿರಾಜ್‌ ಶೆಟ್ಟಿ ಮಾತನಾಡಿ, ಹಿಂದೂ ಕಾರ್ಯಕರ್ತರನ್ನು ಸಂಪ್ಯ ಠಾಣೆ ಪೊಲೀಸರು ಉದ್ದೇಶ ಪೂರ್ವಕವಾಗಿ ಹಿಂಸಿಸುತ್ತಿದ್ದಾರೆ. ಇಂತಹ ಕೃತ್ಯ ಸಂಪ್ಯ ಠಾಣೆಯಲ್ಲಿ ಮಾತ್ರ ನಡೆಯುತ್ತಿದೆ. ಘಟನೆಯೊಂದರ ಬಗ್ಗೆ ಠಾಣೆ ಮೆಟ್ಟಿಲೇರಿದರೆ ನ್ಯಾಯ ಸಿಗುತ್ತಿಲ್ಲ. ಮೈಂದನಡ್ಕ ಪ್ರಕರಣದಲ್ಲೂ ಉದ್ದೇಶ ಪೂರ್ವಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದರು.

ಬೇಕಂತಲೇ ಹಲ್ಲೆ ನಡೆಸಲಾಗಿದೆ
ಸಂಘಟನೆ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌ ನಡೆದದ್ದಲ್ಲ, ಬೇಕಂತಲೇ ಹಲ್ಲೆ ನಡೆಸಲಾಗಿದೆ. ಸಾರ್ವಜನಿಕವಾಗಿ ನಡೆದ ಘಟನೆಗೆ ಸಂಬಂಧಪಟ್ಟಂತೆ ನ್ಯಾಯ ಕೇಳಲು ಹೋಗುವುದೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಂಗಿಗೆ ಚುಡಾಯಿಸಿದ ಎಂಬ ಕಾರಣಕ್ಕೆ ಅಣ್ಣನೊಬ್ಬ ತನ್ನ ತಂಗಿಯನ್ನು ಸಂಪ್ಯ ಠಾಣೆಗೆ ಕರೆದುಕೊಂಡು ಹೋಗಿದ್ದ. ನ್ಯಾಯ ಕೊಡಿಸಬೇಕಿದ್ದ ಪೊಲೀಸರು, ಅಣ್ಣನಿಗೆ ಬೆದರಿಕೆ ಹಾಕಿ, ತಂಗಿಯನ್ನು ಗದರಿಸಿ ಕಳುಹಿಸಿದ್ದಾರೆ. 12 ವರ್ಷಗಳ ಹಿಂದೆಯೇ ಇದ್ದ ಧ್ವಜ ಕಟ್ಟೆಯೊಂದನ್ನು ಏಕಾಏಕಿ ತೆರವು ಮಾಡಿದ್ದಾರೆ. ಈ ವೇಳೆ ಸ್ಥಳೀಯ ಗ್ರಾಮ ಪಂಚಾಯತ್‌ನ ಗಮನಕ್ಕೂ ವಿಷಯವನ್ನು ತಂದಿಲ್ಲ. ಇಂತಹ ಅನೇಕ ಘಟನೆಗಳು ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ನಡೆದಿವೆ. ಈ ಎಲ್ಲ ವಿಚಾರಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇದೆಲ್ಲವನ್ನೂ ನೋಡಿಯೂ ನೋಡದಂತೆ ಸುಮ್ಮನಿದ್ದಾರೆ. ಸಂಪ್ಯ ಠಾಣೆ ವ್ಯಾಪ್ತಿಯಲ್ಲಿ ಅಧಿಕಾರದ ದರ್ಪ ತೋರಿಸುತ್ತಿದ್ದಾರೆ. ಪೊಲೀಸ್‌ ಉಪ ನಿರೀಕ್ಷಕ ಅಬ್ದುಲ್‌ ಖಾದರ್‌ ಹಾಗೂ ಸಿಬಂದಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಹಿಂದೂಗಳ ವಿರುದ್ಧ ಅನ್ಯಾಯ ನಡೆದಾಗ ನ್ಯಾಯ ದೊರಕುತ್ತಿಲ್ಲ  ಎಂದು ಅವರು ಆರೋಪಿಸಿದರು.

ಹಿಂಜಾವೇ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಅರುಣ್‌ ಕುಮಾರ್‌ ಪುತ್ತಿಲ, ಮುಂಡೂರು ಗ್ರಾ.ಪಂ. ಸದಸ್ಯ ಅಶೋಕ್‌ ಕುಮಾರ್‌ ಪುತ್ತಿಲ, ತಾಲೂಕು ಪ್ರ. ಕಾರ್ಯದರ್ಶಿ ಚಿನ್ಮಯ್‌ ರೈ, ಹಿಂಜಾವೇ ಕಡಬ ಅಧ್ಯಕ್ಷ ಹರೀಶ್‌ ಹುಂಡಿಲ,ನಗರಸಭೆ ಸದಸ್ಯ ರಾಜೇಶ್‌ ಬನ್ನೂರು, ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟ್‌ ಕಡಬ, ಮುಖಂಡರಾದ ಗಣಪತಿ ನಾಯಕ್‌, ರವೀಂದ್ರದಾಸ್‌ ಪೂಂಜ, ಜಿಲ್ಲಾ ಕಾರ್ಯದರ್ಶಿ ಮೋಹನ್‌ ಕೊಯಿಲ, ರಜನೀಶ್‌, ಹರೀಶ್‌, ದಿನೇಶ್‌, ಉಮೇಶ್‌ ಉಪಸ್ಥಿತರಿದ್ದರು.

Advertisement

ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಒಂದು ವಾರ ನಿರಂತರ ಪ್ರತಿಭಟನೆಗೆ ಕರೆ ನೀಡಲಾಗಿದೆ. ಜ. 2ರಂದು ಜನಜಾಗೃತಿ ಸಭೆ ನಡೆಯಲಿದ್ದು, ಅಲ್ಲಿವರೆಗೂ ಪ್ರತಿಭಟನೆ ಮುಂದುವರಿಯಲಿದೆ. ಈ ನಡುವೆ ಎಸ್ಪಿ ಅವರು ಮುಖಂಡರ ಜತೆ ಮಾತುಕತೆ ನಡೆಸಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬುಧವಾರ ನಡೆದ ಪ್ರತಿಭಟನೆಯ ನೇತೃತ್ವವನ್ನು ಕಡಬ ಹಿಂದೂ ಜಾಗರಣ ವೇದಿಕೆ ವಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.