ಅಮರಾವತಿ: “ಹಿಂಸೆಯಿಂದ ಯಾರಿಗೂ ಪ್ರಯೋಜನವಿಲ್ಲ. ಹಿಂಸಾ ಪ್ರಿಯವಾಗಿರುವ ಸಮಾಜ ಈಗ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ನಾವು ಎಂದೆಂದಿಗೂ ಅಹಿಂಸಾತ್ಮಕ ಮತ್ತು ಶಾಂತಿ ಪ್ರಿಯರಾಗಿರಬೇಕು. ಇದಕ್ಕಾಗಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಮಾನವೀಯತೆ ಕಾಪಾಡುವುದು ಅತ್ಯಗತ್ಯ. ನಾವೆಲ್ಲರೂ ಈ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
ಪೂರ್ವ ಮಹಾರಾಷ್ಟ್ರದ ಭಂಖೇಡಾ ರಸ್ತೆಯಲ್ಲಿರುವ ಕನ್ವರ್ರಾಮ್ ಧಾಮದಲ್ಲಿ ಸಂತ ಕನ್ವರ್ರಾಮ್ ಅವರ ಮರಿ ಮೊಮ್ಮಗ ಸಾಯಿ ರಾಜೇಶ್‌ಲಾಲ್ ಮೊರ್ದಿಯಾ ಅವರ ‘ಗದ್ದಿನಾಶಿನಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವತ್ ಮಾತನಾಡಿದರು.
ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸುವ ಮತ್ತು ಮಾನವೀಯತೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದ ಅವರು ಇತ್ತೀಚೆಗೆ ದೇಶದ ಹಲವಾರು ಭಾಗಗಳಲ್ಲಿ ವಿವಿಧ ಗುಂಪುಗಳ ನಡುವೆ ಇತ್ತೀಚಿನ ಘರ್ಷಣೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿಂಧಿ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ದೇಶದಲ್ಲಿ ಸಿಂಧಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಭಾರತ ಬಹುಭಾಷಾ ದೇಶವಾಗಿದ್ದು, ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.
ಅಮರಾವತಿ ಜಿಲ್ಲೆ ಮತ್ತು ದೇಶದ ವಿವಿಧ ಭಾಗಗಳಿಂದ ನೂರಾರು ಸಿಂಧಿ ಸಮುದಾಯದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಆರ್‌ಎಸ್‌ಎಸ್ ಮುಖ್ಯಸ್ಥರು ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಪ್ರತಿಪಾದಿಸಿದರು ಮತ್ತು ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಲು ಮತ್ತು ಮಾನವೀಯತೆಯನ್ನು ಕಾಪಾಡಲು ಕರೆ ನೀಡಿದರು.