ಕುಳಗೇರಿ ಕ್ರಾಸ್: (ಕೆರೂರ): ಪಟ್ಟಣದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಸಿಪಿಐ ನಡೆಸಿದ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಕೂಡಲೇ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ ಕಾರಂತ ಎಚ್ಚರಿಕೆ ನೀಡಿದರು.
ಕೆರೂರ ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಕೆರೂರ ಚಲೋ ಹೋರಾಟದಲ್ಲಿ ಅವರು ಮಾತನಾಡಿದರು.
ಕೆಲವರು ಹಿಂದು ಸಂಘಟನೆ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಹಿಂದೂ ಸಂಘಟನೆ ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ. ಕೆರೂರಲ್ಲಿ ನಡೆದ ಘಟನೆ ಸಹಿಸುವುದಿಲ್ಲ. ನ್ಯಾಯ ಸಿಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಹಿಂದೂ ಸಮಾಜ ಸಂರಕ್ಷಣೆಯೇ ನಮ್ಮ ಗುರಿಯಾಗಿದೆ ಎಂದರು.
ಈ ಹಿಂದೆ ನಮ್ಮ ಕಾರ್ಯಕರ್ತ ಅರುಣ ಮೇಲೆ ಹಲ್ಲೆಯಾದಾಗ ಅದು ವೈಯಕ್ತಿಕ ಗಲಾಟೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಪೊಲೀಸರ ಮೇಲೆ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಸರ್ಕಾರ ಎದುರಿಸಿ ಮಣ್ಣು ತಿನ್ನಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಘಟನೆ ಕುರಿತು ಡಿವೈಎಸ್‌ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರು ನಮ್ಮ ದೇಶವನ್ನ ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ಅಂತವರಿಗೆ ತಕ್ಕ ಪಾಠ ಕಲಿಸಬೇಕಿದೆ. ಕೆಲವರು ಪಿಎಫ್‌ಐ ಹಾಗೂ ಎಸ್‌ಡಿಪಿಐ ಬೆಂಬಲಿಸುವ ಕೆಲಸ ಮಾಡುತ್ತಿದ್ದಾರೆ. ಇದೆ ರೀತಿ ಹಿಂದೂ ಕಾರ್ಯಕರ್ತರ ಮೇಲೆ, ಪೊಲೀಸರು ದೌರ್ಜನ್ಯ ನಡೆಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ಇಂತಹ ಅಧಿಕಾರಿಗಳನ್ನ ತಕ್ಷಣ ವಜಾಗೊಳಿಸಬೇಕು. 10 ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕೆರೂರ ಚಲೋ ಹೋರಾಟಕ್ಕೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ತಿಳಿಸಿದರು.
ಗುಳೇದಗುಡ್ಡ ಅಮರೇಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಕಾಂತೇಶ ಬಿಜಾಪುರ, ಶಿವು ಅವಟಿ, ಆನಂದ ಮುತ್ತಗಿ ಸೇರಿದಂತೆ ನೂರಾರು ಮಹಿಳೆಯರು ಸಂಘಟನಾ ಕಾರ್ಯಕರ್ತರು ಇದ್ದರು. ಕುಮಾರ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು, ಶರಣು ವಜ್ಜಲ್ ವಂದಿಸಿದರು.