ಪಿರಿಯಾಪಟ್ಟಣ: ಪಟ್ಟಣದ ಬಿ.ಎಂ.ರಸ್ತೆಯ ಗ್ರಾಂಡ್ ಕಲೆಕ್ಷನ್ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಹೊಡೆದು ಕಾರಿನಲ್ಲಿ ಇದ್ದ ಒಂದು ಲಕ್ಷ ರೂ. ನಗದನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ತಾಲೂಕಿನ ಬೈಲುಕುಪ್ಪೆಯ ಉದ್ಯಮಿ ಅಣ್ಣಪ್ಪ ಹಣ ಕಳೆದುಕೊಂಡವರು.
ಇವರು ಬುಧವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‌ನಿಂದ ಲಕ್ಷ ರೂ. ಡ್ರಾ ಮಾಡಿಕೊಂಡು ಬಂದು ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಗ್ರಾಂಡ್ ಕಲೆಕ್ಷನ್ ಶೋ ರೂಂ ಬಳಿ ಕಾರನ್ನು ನಿಲ್ಲಿಸಿ ಊಟ ಮಾಡಲು ಪಕ್ಕದ ಹಿಂದೂ ಮಿಲ್ಟ್ರಿ ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಯಾರೋ ಬೈಕಿನಲ್ಲಿ ಬಂದು “ಸರ್ ನಿಮ್ಮ ಕಾರಿನ ಗ್ಲಾಸ್ ಹೊಡೆದು ಹಣದೋಚಿ ಹೋಗುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಅಷ್ಟರಲ್ಲಾಗಲೇ ದರೋಡೆಕೋರರು ಕಾರಿನ ಗ್ಲಾಸ್ ಹೊಡೆದು ಕಾರಿನಲ್ಲಿದ್ದ 1 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸಾರ್ವಜನಿಕರು ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಪಿಐ ಪ್ರದೀಪ್ ಮತ್ತು ಎಸ್‌ಐ ಜಿ.ಜೆ.ಗಣೇಶ್ ಸಿಬ್ಬಂದಿ ಜೊತೆ ಸ್ಥಳಕ್ಕೆ ಧಾವಿಸಿ ಗ್ರಾಂಡ್ ಕಲೆಕ್ಷನ್ ಶೋರೂಂಗೆ ಹೋಗಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪಡೆದು ಶೋಧನೆ ಕಾರ್ಯ ಕೈಗೊಂಡಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಡಹಗಲೇ ದರೋಡೆ: ಪಿರಿಯಾಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ಕಳ್ಳತನ, ದರೋಡೆ ಕೃತ್ಯಗಳು ಹಾಡಹಗಲೇ ರಾಜಾರೋಷವಾಗಿ ನಡೆಯುತ್ತಿವೆ. ಈ ಬಗ್ಗೆ ಪ್ರಕರಣಗಳು ದಾಖಲಾದರೂ ಇದುವರೆಗೂ ಒಬ್ಬ ಕಳ್ಳನ ಸುಳಿವು ಸಿಕ್ಕಿಲ್ಲ, ಕಳೆದ ಸೋಮವಾರ ಹಾಡುಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ಗೃಹಿಣಿಯನ್ನು ಕೊಲೆಗೈದು ಮನೆಯಲ್ಲಿದ್ದ ಹಣ, ಒಡವೆಗಳನ್ನು ದೋಚಿ ಪರಾರಿಯಾಗಿದ್ದರು.
ಇದರಿಂದ ಪಟ್ಟಣದ ಜನತೆ ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಕ್ರಮ ಕೈಗೊಂಡು ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಿ ಕಳ್ಳತನ, ದರೋಡೆ ಕೃತ್ಯಗಳನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.