ವಾಷಿಂಗ್ಟನ್: ಎಚ್-1ಬಿ ವೀಸಾ ವಿಚಾರಕ್ಕೆ ಸಂಬಂಧಿಸಿ ಭಾರತದ ಐಟಿ ದಿಗ್ಗಜರಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತು ಇನ್ಫೋಸಿಸ್ ಕಂಪೆನಿಗಳ ವಿರುದ್ಧ ಅಮೆರಿಕ ಗಂಭೀರ ಆರೋಪ ಮಾಡಿದೆ. ಈ ಎರಡೂ ಕಂಪೆನಿಗಳು ಲಾಟರಿ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರವಾಗಿ ಹೆಚ್ಚುವರಿ ಟಿಕೆಟ್‌ಗಳನ್ನು ಹಾಕಿ ಹೆಚ್ಚೆಚ್ಚು ವೀಸಾ ಪಡೆಯುವ ಹುನ್ನಾರ ನಡೆಸಿವೆ ಎನ್ನುವುದು ಅಮೆರಿಕದ ಆರೋಪ. ಈ ಹಿನ್ನೆಲೆಯಲ್ಲಿ ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ “ಅರ್ಹತೆ ಆಧಾರಿತ ವಲಸೆ ನೀತಿ’ ಜಾರಿಗೆ ಮುಂದಾಗಿದೆ.
ಎಚ್-1 ಬಿ ವೀಸಾ ವಿಚಾರದಲ್ಲಿ ಕಳೆದ ವಾರ ಶ್ವೇತಭವನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ನೂತನ ವೀಸಾ ನೀತಿ ಜಾರಿಯ ಬಳಿಕ ಬೇಡಿಕೆ ಸಾಕಷ್ಟು ಹೆಚ್ಚುತ್ತಿದೆ. ಭಾರಿ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಕಾರಣ ಲಾಟರಿ ಪ್ರಕ್ರಿಯೆ ಮೂಲಕ ನಿರ್ಧರಿಸಲು ಅತ್ಯಾಧುನಿಕ ಆ್ಯಪ್ ಅಭಿವೃದ್ಧಿಪಡಿಸಲಾಧಿಗುತ್ತಿದೆ ಎಂದು ಅಧಿಕೃತವಾಗಿಯೇ ಹೇಳಿದ್ದರು.
ಇದೀಗ ವೈಟ್‌ಹೌಸ್ ಹಿರಿಯ ಅಧಿಕಾರಿಯೊಬ್ಬರು, ಎಚ್-1ಬಿ ವೀಸಾ ಪಡೆದುಕೊಳ್ಳಲಿಕ್ಕಾಗಿ ಟಾಟಾ, ಇನ್ಫೋಸಿಸ್, ಕಾಗ್ನೆ„ಝೆಂಟ್ ಕಂಪೆನಿಗಳು ಹೆಚೆಚ್ಚು ಟಿಕೆಟ್‌ಗಳನ್ನು ಹಾಕಿವೆ. ಹೆಚ್ಚು ವೀಸಾಗಳಿಗಾಗಿ ಬೇಡಿಕೆ ಇಟ್ಟಿವೆ ಎಂದಿದ್ದಾರೆ. ಎಚ್-1ಬಿ ವೀಸಾಗಾಗಿ ಮುಗಿಬಿದ್ದಿರುವ ಭಾರತದ ಈ ಕಂಪೆನಿಗಳ ಸಿಬಂದಿ ಅಮೆರಿಕದಲ್ಲಿ ವರ್ಷಕ್ಕೆ ಅಂದಾಜು 38.79 ಲಕ್ಷ ರೂ.ನಿಂದ 42.02 ಲಕ್ಷ ರೂ. ವೇತನ ಪಡೆದುಕೊಳ್ಳುಧಿತ್ತಾರೆ. ಇನ್ನು ಸಿಲಿಕಾನ್‌ವ್ಯಾಲಿ ಸಾಫ್ಟ್ ವೇರ್ ಎಂಜಿನಿಯರ್‌ಗಳು ಹೆಚ್ಚಾ ಕಡಿಮೆ 96.97 ಲಕ್ಷ ರೂ. ವೇತನ ಪಡೆದುಕೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
38 ಭಾರತೀಯರು ವಶಕ್ಕೆ: ಏತನ್ಮಧ್ಯೆ, ವೀಸಾ ಅವಧಿ ಮುಗಿದರೂ ಅಲ್ಲೇ ಇದ್ದ ಹಾಗೂ ಅಕ್ರಮವಾಗಿ ಕೆಲಸ ಮಾಡುತ್ತಿದ್ದ 38 ಮಂದಿ ಭಾರತೀಯರನ್ನು ಬ್ರಿಟನ್‌ನ ವಲಸೆ ಅಧಿಕಾರಿಗಳು ರವಿವಾರ ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ 9 ಮಂದಿ ಮಹಿಳೆಯರೂ ಸೇರಿದ್ದಾರೆ. ಲೈಸೆಸ್ಟರ್‌ನ ಉಡುಪು ತಯಾರಿಕಾ ಕಂಪೆನಿ ಮೇಲೆ ದಾಳಿ ನಡೆಸಿ, ಇವರನ್ನು ವಶಕ್ಕೆ ಪಡೆಯಲಾಗಿದೆ.
ಟಿಸಿಎಸ್‌ನಿಂದ 11,500 ಮಂದಿ ಸ್ಥಳೀಯರ ನೇಮಕ
ಎಚ್-1ಬಿ ವೀಸಾ ಸಮಸ್ಯೆಯಿಂದ ಪಾರಾಗಲು ಟಿಸಿಎಸ್ 2016-17ನೇ ಸಾಲಿನಲ್ಲಿ ದೇಶದಿಂದಾಚೆ ಬರೋಬ್ಬರಿ 11,500 ಮಂದಿಯನ್ನು ನೇಮಕ ಮಾಡಿಕೊಂಡಿದೆ. ಸ್ಥಳೀಯರ ಉದ್ಯೋಗಕ್ಕೆ ಆದ್ಯತೆ ನೀಡಬೇಕೆಂದು ಸರಕಾರ ಹೇಳಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಬಿ-ಸ್ಕೂಲ್ ಮತ್ತು ಎಂಜಿನಿಯರಿಂಗ್ ಪದವೀಧರರನ್ನೇ ಹೆಚ್ಚಾಗಿ ನೇಮಕ ಮಾಡಲಾಗಿದೆ.
11,500 ಜನರನ್ನು ಅಮೆರಿಕದಲ್ಲಿ ನೇಮಕ ಮಾಡಿಕೊಂಡಿದ್ದೇವೆ. ಕ್ಯಾಂಪಸ್‌ಗಳಿಂದ ಎಂಜಿನಿಯರ್‌ಗಳನ್ನು ಹಾಗೂ ಅಮೆರಿಕದ ಪ್ರಮುಖ 10 ಉದ್ಯಮ ತರಬೇತಿ ಶಾಲೆಗಳಿಂದ ಅನೇಕರನ್ನು ನೇಮಕ ಮಾಡಿಕೊಂಡಿದ್ದೇವೆ.
ರಾಜೇಶ್ ಗೋಪಿನಾಥನ್, ಟಿಸಿಎಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ