ದೇವನಹಳ್ಳಿ: ಕೋವಿಡ್ ಅಟ್ಟಹಾಸ ದಿನೆ ದಿನೆ ಹೆಚ್ಚಾಗುತ್ತಿರುವುದರಿಂದ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಮಾಸ್ಕ್ ಹಾಕದೇ ಇರುವವರಿಗೆ ದಂಡ ವಿಧಿಸುತ್ತಿದೆ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 11 ಸಾವಿರದ ಸನಿಹಕ್ಕೆ ಬರುತ್ತಿದೆ.
ಮೃತ ಪಟ್ಟವರ ಸಂಖ್ಯೆ ಶತಕದ ಅಂಚಿನ ಗಡಿಗೆ ಬರುತ್ತಿದೆ. ಆದರೆ, ಎಷ್ಟೇ ನಿಯಂತ್ರಣ ಕ್ರಮ ಕೈಗೊಳ್ಳುತ್ತಿದ್ದರೂ ಸಾರ್ವಜನಿಕರು ಅನಗತ್ಯವಾಗಿ ಓಡಾಟ, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಈ ನಡುವೆ ಮೊದಲು ತುಸು ಮೃಧು ಧೋರಣೆ ತಾಳಿದ್ದ ಜಿಲ್ಲಾಡಳಿತ ದಂಡ ಪ್ರಯೋಗಗಕ್ಕೆ ಮುಂದಾಗಿದೆ.
ಜಿಲ್ಲೆಯ ಪೊಲೀಸರಿಂದ 12302 ಪ್ರಕರಣ ದಾಖಲಿಸಿದ್ದು, ಅದರಲ್ಲಿ 12ಲಕ್ಷ 66 ಸಾವಿರ ರೂ. ವಸೂಲಾತಿ ಆಗಿದೆ. 3 ದಿನದಲ್ಲಿಯೇ 1003 ಪ್ರಕರಣದಲ್ಲಿ1ಲಕ್ಷ 4600ರೂ. ಸಂಗ್ರಹವಾಗಿದೆ. ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆ ವ್ಯಾಪ್ತಿಗಳಲ್ಲಿ 1687 ಪ್ರಕರಣದಲ್ಲಿ 2 ಲಕ್ಷ 39 ಸಾವಿರದ 50ರೂ. ದಂಡ ವಿಸಲಾಗಿದೆ. ದೇವನಹಳ್ಳಿ ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಉಗುಳಿದರೂ ದಂಡ ವಿಧಿಸಲಾಗಿದೆ.
ದಂಡಕ್ಕೂ ಹೆದರದ ಜನ: ನಿಯಮ ಉಲ್ಲಂಘನೆ ವಿರುದ್ಧ ಜಿಲ್ಲಾಡಳಿತ ದಂಡ ವಿಧಿಸಲು ಮುಂದಾಗಿದ್ದರೂ ಪಾಲನೆಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಪರಸ್ಪರ ಅಂತರ ವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವಿಕೆ ಸಾಮಾನ್ಯವಾಗಿದೆ. ಮಾಸ್ಕ್ ಧರಿಸದೇ ಓಡಾಡುವುದು, ಎಲ್ಲೆಂದರಲ್ಲಿ ಉಗುಳುವುದು ಸಾಮಾನ್ಯವಾಗಿದೆ. ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಕಿತ್ತಾಟ, ವಾಗ್ಧಾನ ನಡೆಯುತ್ತಿರುವ ಪ್ರಸಂಗ ಹೆಚ್ಚಾಗುತ್ತಿದೆ. ದಂಡ ವಿಧಿಸಲು ಮುಂದಾದ ಅಧಿಕಾರಿಗಳು, ಪೊಲೀಸರ ವಿರುದ್ಧಜನತೆಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಸಾರ್ವಜನಿಕರ ಅನುರ್ಚಿತ ವರ್ತನೆ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ. ಮುಖ್ಯ ರಸ್ತೆಗಳಲ್ಲಿ ಠಾಣೆ ಸಮೀಪಜಿಲ್ಲೆಯ ಆಯಾಕಟ್ಟಿನ ಭಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು, ನಿಯಮ ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿ ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ 97 ಜನ ಕೋವಿಡ್ ಗೆ ಸಾವನ್ನಪ್ಪಿದ್ದಾರೆ. ಇಷ್ಟಾದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ದೇವನಹಳ್ಳಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಿದ್ದರೂ ಕೋವಿಡ್ ತೀವ್ರತೆಕಂಡುಬಂದಿಲ್ಲ.ಪ್ರತಿನಿತ್ಯ ಸಾವಿರಾರು ವಿದೇಶಿಗರು ನೆರೆ ರಾಜ್ಯದವರು ಜಿಲ್ಲೆಗೆ ಪ್ರವೇಶಿಸಿದರು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಸೋಂಕು ನಿಯಂತ್ರಿಸಲಾಗಿತ್ತು.
ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವಕಾರ್ಯ ಮಾಡಲಾಗುತ್ತಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ, ಪುರಸಭಾ ಅಧಿಕಾರಿಗಳು ಹಾಗೂ ಪೊಲೀಸರು ಮಾಸ್ಕ್ ರಹಿತ ಓಡಾಡುತ್ತಿರುವವರಿಗೆ ದಂಡ ವಿಧಿಸುತ್ತಿದ್ದಾರೆ.ಈಮೂಲಕ ಸಾರ್ವಜನಿಕರಿಗೆ ಕೋವಿಡ್ ಎಚ್ಚರಿಕೆ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಕೋವಿಡ್ ಸೋಂಕಿತರನ್ನು ಬೇಗ ಪತ್ತೆಹಚ್ಚಿ ಚಿಕಿತ್ಸೆದೊರಕಿಸಿಕೊಡುವುದು ಇದರ ಉದ್ದೇಶವಾಗಿದೆ.
–ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಕೋವಿಡ್ ದೊಂದಿಗೆ ಜೀವನ ಸಾಗಿಸುವುದು ಅನಿವಾರ್ಯ.ಜಿಲ್ಲೆಯ 4 ತಾಲೂಕುಗಳ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಿಗಾವಹಿಸಿದ್ದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ಇದ್ದರೆ, ಮುಲಾಜಿಲ್ಲದೆ ದಂಡ ವಿಧಿಸಲು ಸೂಚನೆ ನೀಡಲಾಗಿದೆ.
– ರವಿ.ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
–ಎಸ್.ಮಹೇಶ್