ರಾಯಚೂರು: ಎಲ್ಲೆಡೆ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡಿದರೆ ಜಿಲ್ಲೆಯಲ್ಲಿ ಕುಟುಂಬವೊಂದು ಒಂದೇ ವೇದಿಕೆಯಡಿ ನಾಲ್ಕು ಮದುವೆಗಳನ್ನು ಅದ್ದೂರಿಯಾಗಿ ನೆರವೇರಿಸಿ ಕೋವಿಡ್ ನಿಯಮ ಉಲ್ಲಂಘಿಸಿದೆ.
ದೇವದುರ್ಗ ತಾಲೂಕಿನ ಆಕಳಕುಂಪಿಯಲ್ಲಿ ಶುಕ್ರವಾರ ಒಂದೇ ಕುಟುಂಬದ ನಾಲ್ವರ ಮದುವೆಯನ್ನು ಅದ್ದೂರಿಯಾಗಿ ಮಾಡಲಾಗಿದೆ.
ಒಂದೆಡೆ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದ್ದರೆ; ಜನ ಮಾತ್ರ ಕೋವಿಡ್ ನಿಯಮಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಮದುವೆಗಳಿಗೆ ನೀಡುತ್ತಿದ್ದ ಅನುಮತಿ ರದ್ದುಗೊಳಿಸಲಾಗಿದೆ. ಆದರೆ, ಜಿಲ್ಲಾಡಳಿತದ ನಿಯಮಗಳು ಗ್ರಾಮೀಣ ಭಾಗದಲ್ಲಿ ಜಾರಿಯಾಗುತ್ತಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ.
ಇದನ್ನೂ ಓದಿ : ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು
ಗ್ರಾಮದಲ್ಲಿ ಬರೋಬ್ಬರಿ 37 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದಾಗ್ಯೂ ಈ ರೀತಿ ಮದುವೆ ಮಾಡುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ನಾಲ್ಕು ಮದುವೆಗಳು ನಡೆದ ಕಾರಣ ಹೆಚ್ಚು ಜನ ಸೇರಿದ್ದರು. ಅಲ್ಲದೇ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಕೂಡ ಮಾಡಲಾಗಿದೆ. ಇದನ್ನು ಗಮನಿಸಬೇಕಾದ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.