ಸುರಪುರ: ಗಣೇಶ ಉತ್ಸವವನ್ನು ಸೌರ್ಹಾದಯುತವಾಗಿ ಸಂಭ್ರಮದಿಂದ ಆಚರಿಸಿ. ಆದರೆ ಉತ್ಸವಕ್ಕೆ ಸರಕಾರ ಕಾನೂನು ಪಾಲಿಸಬೇಕು. ಗಣೇಶ ಸ್ಥಾಪನಾ ಸಮಿತಿಯವರು ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುರಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಡಾ| ಟಿ. ಮಂಜುನಾಥ ತಿಳಿಸಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಗಣೇಶ ಉತ್ಸವ ಶಾಂತಿ ಪಾಲನಾ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗಣೇಶ ಪ್ರತಿಷ್ಠಾಪನಾ ಸಮಿತಿಯವರು ಕಡ್ಡಾಯವಾಗಿ ನಗರಸಭೆ ಅಥವಾ ಗ್ರಾಪಂ ಮತ್ತು ಜೆಸ್ಕಾಂ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಆರು ಅಡಿಗಿಂತ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸುವಂತಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಹಚ್ಚುವಂತಿಲ್ಲ ಎಂದು ತಾಕೀತು ಮಾಡಿದರು.
ಪಿಒಪಿ ಬದಲಾಗಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ. ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಮಹಿಳೆಯರು, ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕಾನೂನು ಬಾಹಿರ ಚಟುವಟಿಕೆ ನಡೆಸುವಂತಿಲ್ಲ ಎಂದು ಖಡಕ್ಕಾಗಿ ಸೂಚಿಸಿದರು.
ಡಿಜೆ ನಿಷೇಧಿಸಲಾಗಿದೆ. ವಿಸರ್ಜನೆ ದಿನ ಮತ್ತು ಮಾರ್ಗ ಮುಂಚಿತವಾಗಿ ತಿಳಿಸಬೇಕು. ರಾತ್ರಿ 10ರ ಒಳಗಾಗಿ ವಿಸರ್ಜನೆ ಮುಗಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಪಿಐ ಸುನೀಲಕುಮಾರ ಮೂಲಿಮನಿ, ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ, ಪಿಎಸ್‌ಐ ಕೃಷ್ಣಾ ಸುಬೇದಾರ, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಇದ್ದರು.