Advertisement

ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ 7 ಮಂದಿ ಬಿಎಸ್‌ಪಿ ನಗರಸಭಾ ಸದಸ್ಯರ ಸದಸ್ಯತ್ವ ರದ್ದು

09:18 PM Sep 06, 2021 | Team Udayavani |

ಚಾಮರಾಜನಗರ: ಬಹುಜನ ಸಮಾಜ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿಯೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತ ಚಲಾಯಿಸಿದ ಕಾರಣ ಕೊಳ್ಳೇಗಾಲ ನಗರಸಭೆಯ 7 ಮಂದಿ ಬಿಎಸ್‌ಪಿ ಸದಸ್ಯರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ರದ್ದುಗೊಳಿಸಿದೆ.

Advertisement

ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷೆ  ಗಂಗಮ್ಮ, ಸದಸ್ಯರಾದ ಎಲ್. ನಾಗಮಣಿ, ನಾಸೀರ್ ಷರೀಫ್, ಎನ್. ಪವಿತ್ರಾ,  ಪ್ರಕಾಶ್, ಎನ್. ರಾಮಕೃಷ್ಣ,  ನಾಗಸುಂದ್ರಮ್ಮ ಅವರ ಸದಸ್ಯತ್ವವನ್ನು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ಸೆಕ್ಷನ್ 4ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಬಹುಜನ ಸಮಾಜ ಪಾರ್ಟಿಯ ನಗರಸಭಾ ಸದಸ್ಯರಾದ ಈ ಏಳು ಮಂದಿ ತಮ್ಮ ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸಿರುವುದು ಸಾಬೀತಾಗಿದೆ. 2020 ರ ಅಕ್ಟೋಬರ್ 29ರಂದು , ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಸಭೆಯಲ್ಲಿ ಪಕ್ಷದ ವಿಪ್ ಆದೇಶದ ವಿರುದ್ಧ ಮತ ಚಲಾಯಿಸಿದ್ದಾರೆ. ಸಭೆ ನಡೆದ 15 ದಿನಗಳ ಒಳಗೆ ಬಹುಜನಸಮಾಜ ಪಕ್ಷವು ಈ ಸದಸ್ಯರನ್ನು ಮನ್ನಿಸದ ಕಾರಣ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಗೆ ಕಾರಣರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಕೊಳ್ಳೇಗಾಲ ನಗರಸಭೆಯು ಒಟ್ಟು 31 ಸದಸ್ಯರನ್ನು ಹೊಂದಿದೆ. ಕಳೆದ ಬಾರಿ ನಡೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 11, ಬಿಜೆಪಿಯಿಂದ 7, ಬಿಎಸ್‌ಪಿಯಿಂದ 9 ಹಾಗೂ ಪಕ್ಷೇತರರಾಗಿ 4 ಮಂದಿ ಗೆದ್ದಿದ್ದರು.

ಇದನ್ನೂ ಓದಿ:ವಿಧಾನಸಭೆಯಲ್ಲಿ ನಮಾಜ್‌ಗೆ ಪ್ರತ್ಯೇಕ ರೂಂ : ಜಾರ್ಖಂಡ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Advertisement

2020 ಅಕ್ಟೋಬರ್ 29ರಂದು ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಬಿಎಸ್‌ಪಿಯ ಗಂಗಮ್ಮ, ಉಪಾಧ್ಯಕ್ಷರಾಗಿ ಬಿಜೆಪಿಯ ಕವಿತಾ 17 ಮತಗಳನ್ನು ಪಡೆದು ಆಯ್ಕೆಯಾದರು.  ಈ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಗೆದ್ದಿದ್ದ 9 ಸದಸ್ಯರ ಪೈಕಿ 7 ಮಂದಿ ಸದಸ್ಯರು ಬಿಜೆಪಿ ಜೊತೆ ಕೈಜೋಡಿಸಿದ್ದರು. ಬಿಎಸ್‌ಪಿಯ 9 ಸದಸ್ಯರಿಗೂ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿತ್ತು. ಆದರೂ 7 ಮಂದಿ ಸದಸ್ಯರು ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಬಿಎಸ್‌ಪಿಯಿಂದ ಜಯಮರಿ, ಕಾಂಗ್ರೆಸ್‌ನಿಂದ ಪುಷ್ಪಲತಾ ಸ್ಪರ್ಧಿಸಿ ಸೋತಿದ್ದರು. ಜಯಮರಿ ಅವರಿಗೆ ಎರಡು ಮತಗಳು (ಜಯಮರಿ ಹಾಗೂ ಜಯಂತ್)  ಬಂದಿದ್ದವು.

2020ರ ಡಿಸೆಂಬರ್ 1ರಂದು ಬಿಎಸ್‌ಪಿ ಸದಸ್ಯೆ ಜಯಮರಿ ಅವರು ಬಿಎಸ್‌ಪಿ ಸದಸ್ಯರು ಪಕ್ಷ ನೀಡಿದ ವಿಪ್ ಆದೇಶದ ನಿರ್ದೇಶನಗಳನ್ನುಉಲ್ಲಂಸಿರುವ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಪಕ್ಷಾಂತರ ನಿಷೇಧ ಅಧಿನಿಯಮದ ಅಡಿಯಲ್ಲಿ ದೂರು ಸಲ್ಲಿಸಿದ್ದರು. ಈ ದೂರನ್ನು ನಗರಸಭೆ ಪೌರಾಯುಕ್ತರು ಡಿ.2ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ರವಾನಿಸಿದ್ದರು. ಜಿಲ್ಲಾಧಿಕಾರಿಗಳ ನ್ಯಾಯಾಲಯ ವಾದಿ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿ ಪ್ರಕರಣದ ವಿಚಾರಣೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next