Advertisement

ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಅಧಿಕಾರಿ ವಿನೋತ್‌ ಪ್ರಿಯಾ

03:06 PM Apr 21, 2017 | Team Udayavani |

ಹುಬ್ಬಳ್ಳಿ: ಕಟ್ಟುನಿಟ್ಟಿನ ಅಧಿಕಾರಿ ಎಂದೇ ಪ್ರಸಿದ್ಧಿ ಪಡೆದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ವಿನೋತ್‌ಪ್ರಿಯಾ ಅವರನ್ನು ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿಯಾಗಿ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗಿದೆ.

Advertisement

ಬಿಬಿಎಂಪಿ ಹೆಚ್ಚುವರಿ ಆಯುಕ್ತರಾಗಿದ್ದ (ಆಡಳಿತ) ಪಾಂಡುರಂಗ ನಾಯ್ಕ ಅವರು ಸಂಸ್ಥೆಯ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಲಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 2 ವರ್ಷ 4 ತಿಂಗಳು ಕಾರ್ಯ ನಿರ್ವಹಿಸಿದ್ದ ವಿನೋತ್‌ಪ್ರಿಯಾ ಅವರು ಸಾರಿಗೆ ಸಂಸ್ಥೆಯ ಏಳ್ಗೆಗೆ ಪ್ರಯತ್ನಿಸಿದ್ದರಲ್ಲದೇ ಸಂಸ್ಥೆಯ ಶ್ರೇಯಸ್ಸಿಗೆ ಹಲವಾರು ಕ್ರಮ ಕೈಗೊಂಡಿದ್ದರು.

ನಷ್ಟ ಕಡಿಮೆ ಮಾಡಿದ್ದರು. ಸೋರಿಕೆ ತಡೆದಿದ್ದರು. ಭ್ರಷ್ಟರನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಂಡಿದ್ದರು. ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಂಡಿದ್ದರು. ವರ್ಕ್‌ಶಾಪ್‌, ಗುಜರಿ, ಬಿಡಿಭಾಗಗಳ ಖರೀದಿ ಹಗರಣಗಳನ್ನು ಬಯಲಿಗೆಳೆದು ಇಲಾಖೆ ತನಿಖೆ ಕೈಗೊಂಡಿದ್ದರು.

ಕಟ್ಟುನಿಟ್ಟಿನ ಕ್ರಮದಿಂದಾಗಿಯೇ ಕೆಲ ಪ್ರಭಾವಿಗಳಿಂದಾಗಿ ವಿನೋತ್‌ಪ್ರಿಯಾ ಅವರಿಗೆ ಹಿಂದೊಮ್ಮೆ ಕೊಪ್ಪಳ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಸಾರ್ವಜನಿಕರು ಹಾಗೂ ರಾಜಕೀಯ ಧುರೀಣರು ವರ್ಗಾವಣೆಯನ್ನು ಖಂಡಿಸಿದ್ದರು. ದಕ್ಷ ಅಧಿಕಾರಿಯನ್ನು ವರ್ಗಾಯಿಸಿರುವುದಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿತ್ತು.

ಹೀಗಾಗಿಯೇ ಸರ್ಕಾರ ಮಣಿಯಬೇಕಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿನೋತ್‌ಪ್ರಿಯಾ ಅವರ ವರ್ಗಾವಣೆಯನ್ನು ರದ್ದುಪಡಿಸಿ ಇದೇ ಸಂಸ್ಥೆಯಲ್ಲಿ ಅವರ ಸೇವೆಯನ್ನು ಮುಂದುವರಿಸಿದ್ದರು. ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆಗೆ ವಿನೋತ್‌ ಪ್ರಿಯಾ ಕಾರಣರಾಗಿದ್ದರು.

Advertisement

ಸಕಾಲ ಮಾದರಿಯ “ಸೇವಾ ಸ್ಪಂದನ’ ಯೋಜನೆ ಅನುಷ್ಠಾನಗೊಳಿಸಿದ್ದರು. ಇದರಿಂದ ಕಾರ್ಯಕ್ಕೆ ಅವಧಿ ನಿಗದಿಯಾಯಿತು. ಇದು ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿತ್ತು. ಕಾನೂನು ಶಾಖೆಯಲ್ಲಿ ಮುಖ್ಯ ಕಾನೂನು ಅಧಿಕಾರಿ ವಿರುದ್ಧ ವಿಚಾರಣೆಗೆ ಆದೇಶಿಸಿ ಸಂಸ್ಥೆಗೆ 8 ಕೋಟಿ ರೂ. ನಷ್ಟವಾಗುವುದನ್ನು ತಡೆದಿದ್ದರು.

ವಿಚಾರಣೆ ನಡೆಸಿದ ನಂತರಕಾನೂನು ಅಧಿಕಾರಿಯನ್ನು ಬೆಂಗಳೂರಿನ ಬಿಎಂಟಿಸಿಗೆ ವರ್ಗಾವಣೆ ಮಾಡಲಾಗಿತ್ತು. ಮೊಬೈಲ್‌, ಕಂಪ್ಯೂಟರ್‌ ನೆರವಿನಿಂದ ರಜೆ ಪಡೆಯುವ ನೂತನ ವ್ಯವಸ್ಥೆಯನ್ನು (ಲೀವ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌) ವಿನೋತ್‌ಪ್ರಿಯಾ ಜಾರಿಗೆ ತಂದಿದ್ದರು. 

ಸಾರಿಗೆ ಸಿಬ್ಬಂದಿಗೆ ಸಮರ್ಪಕವಾಗಿ ರಜೆ ಲಭಿಸಲು ಅನುಕೂಲ ಕಲ್ಪಿಸಿದ್ದರು. ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ನೆರವಿನಿಂದ ಕೇವಲ 6 ಸಾವಿರ ರೂ.ನಲ್ಲಿ ಸಾಫ್ಟ್ವೇರ್‌ ಅಭಿವೃದ್ಧಿ ಪಡಿಸಿದ್ದರಿಂದ ಸಂಸ್ಥೆಗೆ ಲಕ್ಷಾಂತರ ರೂ. ಉಳಿತಾಯ ಮಾಡಿದ್ದರು.  ಸಾರಿಗೆ ಸಂಸ್ಥೆಗಳಲ್ಲಿ ಅವ್ಯಾಹತವಾಗಿ ವರ್ಗಾವಣೆ ನಡೆಯುತ್ತಿದ್ದವು. 

ಇವರು ಸರ್ಕಾರಕ್ಕೆ ಶಿಫಾರಸು ಮಾಡಿ ಸಾರಿಗೆ ಸಂಸ್ಥೆಗಳಲ್ಲಿ ವರ್ಗಾವಣೆ ನೀತಿ ಜಾರಿಯಾಗಲು ಪ್ರಯತ್ನಿಸಿದ್ದರು. ಇದರಿಂದಾಗಿ ವರ್ಷದಲ್ಲಿ ಒಂದೇ ಸಾರಿ ವರ್ಗಾವಣೆ ಮಾಡಬೇಕೆಂಬ ನಿಯಮ ಜಾರಿಗೊಂಡಿತ್ತು. ಒಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಏಳ್ಗೆಗೆ ಪ್ರಾಮಾಣಿಕ ಅಧಿಕಾರಿ ಎಂದೇ ಖ್ಯಾತಿ ಪಡೆದ ವಿನೋತ್‌ ಪ್ರಿಯಾ ಪ್ರಯತ್ನ ಮಾಡಿದ್ದರು. 

* ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next