ಅಭಿಮಾನ ಅನ್ನೋದೇ ಹಾಗೆ. ತಮ್ಮ ನೆಚ್ಚಿನ ಹೀರೋಗಳ ಸಿನಿಮಾಗಳು ರಿಲೀಸ್ ಆಗುತ್ತವೆ ಅಂದರೆ ಸಾಕು, ಥಿಯೇಟರ್ ಮುಂದೆ ಹಾಕುವ ಕಟೌಟ್ ಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡೋದು, ಚಿತ್ರಮಂದಿರದೊಳಗಿನ ಪರದೆ ಮೇಲೆ, ಹೀರೋ ಎಂಟ್ರಿಯಾಗುತ್ತಿದ್ದಂತೆಯೇ, ಬಾಲ್ಕನಿಯಿಂದ ನಾಣ್ಯಗಳನ್ನು ಎಸೆಯುವ ಮೂಲಕ ಪ್ರೀತಿಯ ಅಭಿಮಾನ ಮೆರೆಯೋದು ಸಾಮಾನ್ಯ. ಇದು ಹೊಸ ವಿಷಯವೇನಲ್ಲ.
ಆದರೆ, ಇಲ್ಲೊಬ್ಬ ವಿಶೇಷ ಅಭಿಮಾನಿಯೊಬ್ಬನ ಬಗ್ಗೆ ಹೇಳಬೇಕು. ಹೆಸರು ಶಿವು ಬನ್ನೇರುಘಟ್ಟ. ಅವರು ಈ ಶುಕ್ರವಾರ ಬೆಳಗ್ಗಿನ ಪ್ರದರ್ಶನದಲ್ಲಿ ವಿನೋದ್ ಪ್ರಭಾಕರ್ ಅಭಿನಯದ “ಕ್ರ್ಯಾಕ್’ ಚಿತ್ರಕ್ಕೆ ಸಾವಿರಾರು ಕಾಯಿನ್‌ಗಳನ್ನು ಎಸೆಯುವುದಕ್ಕೆ ಸಿದ್ಧರಾಗಿದ್ದಾರೆ. ಶಿವು ಅಪ್ಪಟ ಟೈಗರ್ ಪ್ರಭಾಕರ್ ಅಭಿಮಾನಿ. ಅಷ್ಟೇ ಅಲ್ಲ, ಅವರ ಪುತ್ರ ವಿನೋದ್ ಪ್ರಭಾಕರ್ ಅಭಿಮಾನಿಯೂ ಹೌದು.
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಹುಲಿಗಳನ್ನು ಪ್ರೀತಿಯಿಂದ ಆರೈಕೆ ಮಾಡುವ ವ್ಯಕ್ತಿಯೂ ಹೌದು. ವಿ ನೋದ್ ಪ್ರಭಾಕರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ಶಿವು ಬನ್ನೇರುಘಟ್ಟ, ತಮ್ಮ ಅಭಿಮಾನ ತೋರುತ್ತಲೇ ಬಂದಿದ್ದಾರೆ. “ಹೋರಿ’ ಚಿತ್ರದಿಂದ ಹಿಡಿದು, ನಾಳೆ ರಿಲೀಸ್ ಆಗುತ್ತಿರುವ “ಕ್ರ್ಯಾಕ್’ ಚಿತ್ರದವರೆಗೂ ಪ್ರೋತ್ಸಾಹಿಸಿಕೊಂಡೇ ಬಂದಿದ್ದಾರೆ. “ಕ್ರ್ಯಾಕ್’ ಸಿನಿಮಾ ಬಿಡುಗಡೆ ದಿನದ ಮೊದಲ ಪ್ರದರ್ಶನದ ಪರದೆ ಮೇಲೆ ವಿನೋದ್ ಎಂಟ್ರಿಯಾಗುವುದನ್ನು ಕಾದು ಕುಳಿತಿದ್ದಾರೆ.
ಕಾರಣ, ಸ್ಕ್ರೀನ್ ಮೇಲೆ ವಿನೋದ್ ಪ್ರಭಾಕರ್ ಬರುತ್ತಿದ್ದಂತೆಯೇ ಸಾವಿರಾರು ರುಪಾಯಿ ನಾಣ್ಯಗಳನ್ನ ಎಸೆಯಲು ಸಜ್ಜಾಗಿದ್ದಾರೆ. ಅವರ ಈ ತಯಾರಿ ಕಳೆದ ಒಂದು ವರ್ಷದ್ದು ಅಂದರೆ ನಂಬಲೇಬೇಕು. “ಕ್ರ್ಯಾಕ್’ ಸಿನಿಮಾ 2016ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ನಾಳೆ ರಿಲೀಸ್ ಆಗುವವರೆಗೂ ಶಿವು ಬನ್ನೇರುಘಟ್ಟ 1 ರಂದ 5 ರುಪಾಯಿ ನಾಣ್ಯಗಳನ್ನು ಕೂಡಿಟ್ಟಿದ್ದಾರೆ. ಆ ನಾಣ್ಯವನ್ನೆಲ್ಲಾ ವಿನೋದ್ ಪ್ರಭಾಕರ್ ತೆರೆಯ ಮೇಲೆ ಎಂಟ್ರಿಕೊಟ್ಟಾಗ ಅಭಿಮಾನಿಗಳ ಜತೆ ಸೇರಿ
ಎಸೆಯಲಿದ್ದಾರೆ.
ಎಷ್ಟೊಂದು ದುಡ್ಡು ಪೋಲಾಗುತ್ತಿದೆ ಎಂಬ ಬೇಸರ ಬೇಡ. ಶಿವು ಅದಕ್ಕೂ ಒಂದು ವ್ಯವಸ್ಥೆ ಮಾಡಿದ್ದಾರೆ. ಗಾಂಧಿಕ್ಲಾಸ್‌ನಲ್ಲಿ ಅವರ ಹುಡುಗರೇ ಇದ್ದು, ಬಾಲ್ಕನಿಯಿಂದ ತೂರುವ ನಾಣ್ಯಗಳನ್ನು ಆರಿಸಿಕೊಳ್ಳುತ್ತಾರೆ. ಆ ಬಳಿಕ ಆ ಹಣದಿಂದ ಹೊರಗೆ ಇರುವ ವೃದ್ಧರಿಗೆ ಊಟ ಕೊಡಿಸುತ್ತಾರೆ. ಇನ್ನೂ ಕೆಲವರಿಗೆ ಟಿಕೆಟ್ ಕೊಡಿಸಿ, ಕನ್ನಡ ಚಿತ್ರ ನೋಡುವಂತೆ ಪ್ರೋತ್ಸಾಹಿಸುತ್ತಾರೆ. ಇದು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ ಶಿವು.
ವಿನೋದ್ ಪ್ರಭಾಕರ್, “ಇದೆಲ್ಲಾ ಬೇಡ ಅಭಿಮಾನ ಇದ್ದರೆ ಸಾಕು’ ಅಂತ ಹೇಳಿದ್ದರೂ, ಅದೆಷ್ಟೋ ಅಭಿಮಾನಿಗಳು ಹೀಗೆಲ್ಲ ಪ್ರೀತಿ ತೋರುತ್ತಲೇ ಬಂದಿದ್ದಾರೆ. “ಅವರೆಲ್ಲರ ಅಭಿಮಾನಕ್ಕೆ ನಾನು ಚಿರಋಣಿ’ ಎಂದಷ್ಟೇ ಹೇಳುತ್ತಾರೆ.