ಹೊಸದಿಲ್ಲಿ: ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರು ಶನಿವಾರ ಭಾರತಕ್ಕೆ ಮರಳಿದ ಸಂದರ್ಭದಲ್ಲಿ ಭವ್ಯವಾದ ಸ್ವಾಗತವನ್ನು ಪಡೆದಿದ್ದರು. ದೆಹಲಿಯಿಂದ ಹರ್ಯಾಣದ ಬಲಾಲಿಗೆ ಹೋಗುವ ಮಾರ್ಗದಲ್ಲಿ, ವಿನೇಶ್ ಅವರನ್ನು ಹಲವಾರು ಗ್ರಾಮಗಳಲ್ಲಿ ಅಭಿಮಾನಿಗಳು ಮತ್ತು ‘ಖಾಪ್’ ಪಂಚಾಯತ್‌ಗಳು ಸನ್ಮಾನಿಸಿದ್ದಾರೆ. 135 ಕಿಮೀ ದೂರದ ಪ್ರಯಾಣಕ್ಕೆ ಶನಿವಾರ ಸುಮಾರು 13 ಗಂಟೆಗಳನ್ನು ತೆಗೆದುಕೊಳ್ಳಬೇಕಾಯಿತು.
ವಿನೇಶ್ ಅವರ ಹುಟ್ಟೂರು ಬಲಾಲಿಯಲ್ಲಿ ಅದ್ದೂರಿ ಸ್ವಾಗತದ ಬಳಿಕ ಸಮುದಾಯದ ಹಿರಿಯರು ಚಿನ್ನದ ಪದಕ ಹಾಕಿ ಗೌರವಿಸಿದರು.ಸಮಾರಂಭದಲ್ಲಿ ನೂರಾರು ಜನರು ಭಾಗಿಯಾಗಿದ್ದರು. ನೋಟಿನ ಮಾಲೆಗಳನ್ನು ಹಾಕಿ ಅಭಿನಂದಿಸಲಾಯಿತು.
ಪದಕ ಸ್ವೀಕರಿಸಿ ಮಾತನಾಡಿದ ವಿನೇಶ್ ‘ತಮ್ಮ ಗ್ರಾಮದ ಬಲಾಲಿಯ ಮಹಿಳಾ ಕುಸ್ತಿಪಟುಗಳಿಗೆ ತರಬೇತಿ ನೀಡಿದರೆ ಮತ್ತು ನನಗಿಂತ ಹೆಚ್ಚು ಯಶಸ್ವಿಯಾದರೆ ಅದು ತನಗೆ ಹೆಮ್ಮೆಯ ವಿಷಯ’ ಎಂದರು.
‘ ಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕ ಕೊಡದಿದ್ದರೇನು? ಇಲ್ಲಿನ ಜನರು ನನಗೆ ಅದನ್ನು ನೀಡಿದ್ದಾರೆ. ನನಗೆ ಸಿಕ್ಕ ಪ್ರೀತಿ, ಗೌರವ 1000 ಒಲಿಂಪಿಕ್ ಪದಕಕ್ಕೂ ಮಿಗಿಲಾದದ್ದು’ಎಂದರು.
ಫೈನಲ್ ಪಂದ್ಯದಲ್ಲಿ ಅನರ್ಹತೆಯು ಭಾರತ ಮತ್ತು ಕುಸ್ತಿ ಪ್ರಪಂಚದಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು.ಅನರ್ಹತೆಯ ವಿರುದ್ಧ ವಿನೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (CAS) ತಿರಸ್ಕರಿಸಿತ್ತು.