ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Games) ಮೂರು ಕಂಚು ಗೆದ್ದಿರುವ ಭಾರತಕ್ಕೆ ಪದಕದ ಬಣ್ಣ ಬದಲಾಗುವ ಕಾಲ ಬಂದಿದೆ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ವಿನೀಶ್ ಫೋಗಾಟ್ (Vinesh Phogat)ಅವರು ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ (ಆ.06) ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅವರು ಕ್ಯೂಬಾದ ಗುಸ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿದರು. ಈ ಮೂಲಕ ಒಲಿಂಪಿಕ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಸಾಧನೆ ಮಾಡಿದ್ದಾರೆ.
ಮಂಗಳವಾರ ಇದಕ್ಕೂ ಮೊದಲು ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್, ವಿಶ್ವದ ನಂ.1 ರೆಸ್ಲರ್, ಜಪಾನ್‌ನ ಯೂಯಿ ಸುಸಾಕಿ ವಿರುದ್ಧ ಗೆದ್ದು ಅಚ್ಚರಿಗೊಳಿಸಿದರು. ಕ್ವಾರ್ಟರ್ ಫೈನಲ್‌ನಲ್ಲೂ ಆಕ್ರಮಣ ಮುಂದುವರಿಸಿದ ವಿನೇಶ್, ಉಕ್ರೇನ್‌ನ ಒಕ್ಸಾನಾ ಲಿವೆಚ್ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದರು.
ಮಂಗಳವಾರದ ಮೊದಲ ಪಂದ್ಯದಲ್ಲೇ 29 ವರ್ಷದ ವಿನೇಶ್ ಪದಕದ ಭರವಸೆ ಮೂಡಿಸುವಂಥ ಪ್ರದರ್ಶನ ನೀಡಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಜಪಾನ್‌ನ ಯುಯಿ ಸುಸಾಕಿ ವಿರುದ್ಧ ಬಿಗಿ ಪಟ್ಟು ಹಾಕಿದ ವಿನೇಶ್ 3-2 ಅಂತರದಿಂದ ಗೆದ್ದರು. ಇಲ್ಲಿಗೆ ಜಪಾನ್ ಒಲಿಷ್ಠೆ ಸುಸಾಕಿಯ ವಿಶೇಷ ದಾಖಲೆಯೊಂದು ಮುರಿದುಬಿದ್ದಿದೆ. ತನ್ನ ವೃತ್ತಿ ಜೀವನದಲ್ಲಿ ಸತತ 82 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದಿದ್ದ ಸವ್ಯಸಾಚಿ ಸುಸಾಕಿಗೆ ವಿನೇಶ್ ಮೊದಲ ಸೋಲುಣಿಸಿದರು!
ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ವಿನೇಶ್ ಆಕ್ರಮಣ ಮುಂದುವರಿಯಿತು. ಉಕ್ರೇನಿನ ಒಕ್ಸಾನಾ ಲಿವಚ್ ವಿರುದ್ಧ 7-5 ಅಂತರದಿಂದ ಗೆದ್ದರು. ಕಳೆದ ಟೋಕಿಯೊ ಒಲಿಂಪಿಕ್ಸ್ ವೇಳೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ಈ ಬಾರಿ ತನ್ನ ತೂಕದ ವಿಭಾಗವನ್ನು 50 ಕೆಜಿಗೆ ಇಳಿಸಿಕೊಂಡಿದ್ದಾರೆ.
ಜನಪ್ರಿಯ ಬಾಲಿವುಡ್ ಚಿತ್ರ ದಂಗಲ್‌ನ ಫೋಗಾಟ್ ಕುಟುಂಬಕ್ಕೆ ವಿನೇಶ್ ಫೋಗಾಟ್ ಸೇರಿದ್ದಾರೆ. ಮಹಾವೀರ್ ಫೊಗಾಟ್ ಅವರ ತಮ್ಮನ ಮಗಳು ವಿನೇಶ್. ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ದಾಖಲೆ ಹೊಂದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 1, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3 ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 1 ಪದಕ ಗೆದ್ದ ಸಾಧನೆ ವಿನೇಶ್ ಅವರದ್ದಾಗಿದೆ.