ವಿಜಯಪುರ: ಭೀಮಾತೀರದ ಮಹಾದೇವ ಭೈರಗೊಂಡ ಹಾಗೂ ಸಹಚರರ ಮೇಲಿನ ದಾಳಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದ ಪ್ರಮುಖ ಆರೋಪಿ ವಿಮಲಾಬಾಯಿ ಚಡಚಣ ಳನ್ನು ಭಾರಿ ಭದ್ರತೆಯಲ್ಲಿ ಕೊಂಕಣಗಾಂವ ಗ್ರಾಮಕ್ಕೆ ಕರೆತಂದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
2020 ರ ನವೆಂಬರ್ 2 ರಂದು ಮಹಾದೇವ ಭೈರಗೊಂಡ ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಸಿ, ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು.
ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ವಿಮಲಾಬಾಯಿ ಹಾಗೂ ಆಕೆಯ ಪತಿ ಮಲ್ಲಿಕಾರ್ಜುನ ಚಡಚಣ ಶರಣಾಗತಿ ಆಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಹೀಗಾಗಿ ಮಹಾದೇವ ಮೇಲಿನ ದಾಳಿ ಪ್ರಕರಣದ ಎರಡನೇ ಆರೋಪಿಯಾಗಿರುವ ವಿಮಲಾಬಾಯಿ ಹಾಗೂ ಅಕೆಯ ಸಹಚರ ಸೋನ್ಯಾ ರಾಠೋಡ ಆ.2 ರಂದು ವಿಜಯಪುರ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶರಣಾಗಿದ್ದರು.
ಭೀಮಾತೀರದ ಕುಖ್ಯಾತ ಹಂತಕ ಎನಿಸಿದ್ದ ಧರ್ಮರಾಯ ಚಡಚಣ ಎಂಬವನನ್ನು ಮಹಾದೇವ ಭೈರಗೊಂಡ ಸಹಕಾರದಿಂದ ಪೊಲೀಸರ ನಕಲಿ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದ ಹಾಗೂ ಪೊಲೀಸರ ವಶದಲ್ಲಿದ್ದ ಗಂಗಾಧರ ಚಡಚನನ್ನು ತನ್ನ ವಶಕ್ಕೆ ಪಡೆದು ಹತ್ಯೆ ಮಾಡಿದ ಆರೋಪದಲ್ಲಿ ಮಹಾದೇವ ಭೈರಗೊಂಡ ಬಂಧನವಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ.
ಈ ಹಂತದಲ್ಲಿ ಚಡಚಣ ಸಹೋದರರ ತಾಯಿ ವಿಮಲಾಬಾಯಿ ಚಡಚಣ ತನ್ನ ಮಕ್ಕಳ ಹತ್ಯೆಗೆ ಪ್ರತಿಕಾರವಾಗಿ ಭೈರಗೊಂಡ ಕಾರಿಗೆ ಡಿಕ್ಕಿ ಹೊಡಿಸಿ, ಹತ್ಯೆಗೆ ಯತ್ನಿಸಿದ ಆರೋಪಿಯಾಗಿದ್ದಳು.
ಮಹಾದೇವ ಭೈರಗೊಂಡ ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದವಿಮಲಾಬಾಯಿ ಇದೀಗ ನ್ಯಾಯಾಲಯಕ್ಕೆ ಶರಣಾಗುತ್ತಿದ್ದಂತೆ, ಆಕೆಯನ್ನು 5 ದಿನ ಪೊಲೀಸ್ ಕಸ್ಟಡಿಗೆ ಪಡೆದಿರುವ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಕಸ್ಟಡಿಯಲ್ಲಿ ವಿಚಾರಣೆ ನಡೆಸಿದ್ದಾರೆ.
ಮಹಾದೇವ ಭೈರಗೊಂಡ ಹತ್ಯೆಗೆ ಸಂಚು ರೂಪಿಸಿದ್ದ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮಕ್ಕೆ ಕರೆತಂದಿರುವ ಪೊಲೀಸರು ಎಸ್ಪಿ ಆನಂದಕುಮಾರ ಹಾಗೂ ಡಿಎಸ್ಪಿ ನಂದರೆಡ್ಡಿ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಹತ್ಯೆಗೆ ಸಂಚು ರೂಪಿಸಿದ ಕೊಂಕಣಗಾಂವ ಗ್ರಾಮದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.