ಯಾದಗಿರಿ: ಪ್ರತಿ ಬಾರಿಯೂ ಪ್ರವಾಹದ ವೇಳೆ ಶಿವನೂರು ಗ್ರಾಮ ಜಲಾವೃತಗೊಂಡು ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಮ್ಮ ಗ್ರಾಮವನ್ನು ಸ್ಥಳಾಂತರಕ್ಕೆ ಮನವಿ ಮಾಡಿದರೂ ಯಾರೊಬ್ಬರು ತಮ್ಮ ಗೋಳು ಕೇಳುತ್ತಿಲ್ಲ. ಈ ಸಂಕಷ್ಟದಿಂದ ನಮ್ಮನ್ನು ಶಾಶ್ವತವಾಗಿ ರಕ್ಷಿಸುವಂತೆ ಗ್ರಾಮಸ್ಥರು ಸಚಿವ ಪ್ರಭು ಚವ್ಹಾಣ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಎದುರು ಅಳಲು ತೋಡಿಕೊಂಡಿದ್ದಾರೆ.
ವಡಗೇರಾ ತಾಲೂಕಿನ ಪ್ರವಾಹ ಪೀಡಿತ ಶಿವನೂರಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಗ್ರಾಮಸ್ಥರು ಗುಡಿ ಕಟ್ಟೆಗೆ ಸಚಿವರು ಮತ್ತು ಶಾಸಕರನ್ನು ಕೂಡಿಸಿ ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. ಸುಮಾರು 30 ವರ್ಷಗಳಿಂದ ಬೇಡಿಕೆಯಿಟ್ಟರೂ ನಮಗೆ ಯಾರು ಸ್ಪಂದಿಸುತ್ತಿಲ್ಲ. ನಿಮ್ಮನ್ನು ನಂಬಿದ್ದೇವೆ. ನಮಗೆ ಶಾಶ್ವತ ಪರಿಹಾರ ಒದಗಿಸುವಂತೆಕೇಳಿಕೊಂಡರು. ಗ್ರಾಮದ 1 ಕಿ.ಮೀ ಅಂತರದಲ್ಲಿ 18 ಎಕರೆಯಷ್ಟು ಖಾಸಗಿ ಸ್ಥಳ ನೀಡಲು ವ್ಯಕ್ತಿಗಳು ಸಿದ್ಧವಿದ್ದು ಸರ್ಕಾರ ಜಮೀನು ಖರೀದಿಸಿ ಮನೆ ಕಟ್ಟಿಸಿಕೊಟ್ಟು ಪ್ರವಾಹದಿಂದ ಸುರಕ್ಷಿತವಾಗಿಸಲು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದಲ್ಲಿ ಒಟ್ಟು 150 ಮನೆಗಳಿದ್ದು, ಪ್ರವಾಹದಿಂದ ಈಗಾಗಲೇ 77 ಮನೆಗಳಿಗೆ ನೀರು ನುಗ್ಗಿದ್ದು, ಇಡೀ ಗ್ರಾಮವೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದು, ಬೆರಳೆಣಿಕೆ ಜನ ಉಳಿದುಕೊಂಡಿದ್ದಾರೆ. ಪ್ರವಾಹದ ಚಿಂತೆಯಲ್ಲಿ ತಲೆಗೆ ಕೈಯಿಟ್ಟು ಕುಳಿತಿದ್ದ ಅಜ್ಜಿಯೊಬ್ಬರು ಏನಜ್ಜಿ ನೀವು ಕಾಳಜಿ ಕೇಂದ್ರಕ್ಕೆ ತೆರಳಿಲ್ಲವೇಕೆ ಎಂದು ಪ್ರಶ್ನಿಸಿದ್ದಕ್ಕೆ “ಏನ್ ಮಾಡೋದು ರೀ, ಮಕ್ಕಳೆಲ್ಲಾ ಹೋಗಿದ್ದಾರೆ. ಸಣ್ಣ ಮಕ್ಕಳು, ಜಾನುವಾರುಗಳನ್ನು ಪ್ರತಿಬಾರಿ ತೆಗೆದುಕೊಂಡು ಎಲ್ಲಿಗೆ ತೆರಳಬೇಕು, ಮನೆ ಬಿಟ್ಟು ಎಲ್ಲಿಗೆ ಹೋಗಬೇಕು ತಿಳಿಯುತ್ತಿಲ್ಲ. ನಮಗೆ ಬೇರೆ ಕಡೆ ಸರ್ಕಾರ ಮನೆ ಕಟ್ಟಿಕೊಟ್ಟರೆ ಅಲ್ಲೇ ಉಳಿಯುತ್ತೇವೆ. ನಮಗೆ ಮನೆ ಕಟ್ಟಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ’ ಎಂದು ಹಣಮಂತಿ ತಮ್ಮ ನೋವು ಹೇಳಿಕೊಂಡರು.
ಅಧಿಕಾರಿಗಳ ಕಾರ್ಯ ವೈಖರಿಗೆ ಆಕ್ರೋಶ: ಕಳೆದೊಂದು ವಾರದಿಂದ ಗ್ರಾಮ ಸಂಪೂರ್ಣ ಜಲಾವೃತಗೊಂಡು ಅನಾಥರಾಗಿದ್ದೇವೆ. ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಬೆಂಡೆಬೆಂಬಳಿ ಕಾಳಜಿ ಕೇಂದ್ರದಲ್ಲಿ ನೆಲೆಸಿರುವ ಶಿವನೂರ ಗ್ರಾಮದ ಸಂತ್ರಸ್ತರು ಜಿಲ್ಲಾ ಉಸ್ತುವಾರಿಸಚಿವ ಪ್ರಭು ಚವ್ಹಾಣ ಹಾಗೂ ಶಾಸಕ ಮುದ್ನಾಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸುತ್ತಿರುವ ಸಂದರ್ಭದಲ್ಲಿ ಗ್ರಾಮದ ಯುವಕರು ಗಂಭೀರ ಸಮಸ್ಯೆಯಿರುವ ಶಿವನೂರ ಗ್ರಾಮಕ್ಕೆ ಜಿಲ್ಲಾ ಧಿಕಾರಿಗಳು ಏಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಸಮಜಾಯಿಷಿ ನೀಡಿದ ಶಾಸಕ ಮುದ್ನಾಳ್ ಕೃಷ್ಣಾ, ಭೀಮಾ ಪ್ರವಾಹದಿಂದ ಹಲವಾರು ಗ್ರಾಮಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗಿದೆ. ಆದರೂ ಅವರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಶಿವನೂರ, ರೋಜಾ ಗ್ರಾಮಗಳು ಜಲಾವೃತಗೊಂಡು ಪ್ರತಿ ಬಾರಿಯೂ ಜನರು ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಜನರು ಹೆದರುವ ಅವಶ್ಯಕತೆಯಿಲ್ಲ. ಸದ್ಯಕ್ಕೆ ಪ್ರವಾಹ ಇಳಿಯುವವರೆಗೆ ಕಾಳಜಿ ಕೇಂದ್ರಗಳಲ್ಲಿಯೇ ಇರಿ. ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಶ್ವತ ಪರಿಹಾರದ ಕುರಿತು ಮುಖ್ಯಮಂತ್ರಿಗಳೊಂದಿಗೆ ಈ ಭಾಗದ ಶಾಸಕರ ಜತೆಗೂಡಿ ಚರ್ಚಿಸಿ ಕ್ರಮ ವಹಿಸಲಾಗುವುದು.
-ಪ್ರಭು ಬಿ. ಚವ್ಹಾಣ, ಜಿಲ್ಲಾ ಉಸ್ತುವಾರಿ ಸಚಿವರು
-ಅನೀಲ ಬಸೂದೆ