ಹುಣಸೂರು : ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಬಿಳಿಕೆರೆ ಸುತ್ತ ಮುತ್ತಲ ಗ್ರಾಮಗಳಿಗೆ ಹಗಲು ವೇಳೆ ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆಂದು ಆರೋಪಿಸಿ ಬಿಳಿಕೆರೆ ಚೆಸ್ಕಾಂ ಎಇಇ ಕಚೇರಿಯಲ್ಲಿ ರೈತ ಮುಖಂಡರು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷರಾದ ನಂಜೇಗೌಡ ಮತ್ತು ಹಿಮ್ಮಾವು ರಘು ರವರ ನೇತೃತ್ವದಲ್ಲಿ ಈ ಭಾಗದ ರೈತರಿಗೆ ಬೆಳಗಿನ ಸಮಯದಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ಏಳು ಗಂಟೆ ಗುಣಮಟ್ಟದ ವಿದ್ಯುತ್ ನೀಡಬೇಕು. ಉತ್ತಮ ಟ್ರಾನ್ಸ್ ಫಾರಂಗಳನ್ನು ಅಳವಡಿಸುವಂತೆ ಒತ್ತಾಯಿಸಿದರು.
ವಿದ್ಯುತ್ ವಿಚಾರದಲ್ಲಿ ರೈತರಿಗೆ ಯಾವುದೇ ತೊಂದರೆ ನೀಡದಂತೆ ಮತ್ತು ರೈತರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವಂತೆ ಒತ್ತಾಯಿಸಿ, ಸ್ಥಳಕ್ಕೆ ಎ.ಇ.ಇ.ವಿಜಯರತ್ನರನ್ನು ಕರೆಸಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಬಿಳಿಕೆರೆ ಚೆಸ್ಕಾಂ ಎ.ಇ. ಜಯಕುಮಾರ್ ಎಇಇರವರಿಗೆ ಮಾಹಿತಿ ನೀಡಿದ ಮೇರೆಗೆ ಹುಣಸೂರಿನಲ್ಲಿದ್ದ ಸಭೆ ಮುಗಿಸಿ ಬಿಳಿಕೆರೆ ಕಚೇರಿಗೆ ಬಂದು ರೈತ ಮುಖಂಡರೊಂದಿಗೆ ಚರ್ಚಿಸಿ, ರೈತರ ಸಮಸ್ಯೆಗಳ ಬಗ್ಗೆ ತಮಗೆ ಮಾಹಿತಿಯಿದ್ದು, ಶೀಘ್ರದಲ್ಲಿಯೇ ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಮೇರೆಗೆ ಧರಣಿ ಹಿಂಪಡೆದರು.
ಇದನ್ನೂ ಓದಿ : ಒಂದೇ ಸಂಘಟನೆಯಡಿ ಬ್ರಾಹ್ಮಣರು ಒಂದಾಗಬೇಕು: ಅಶೋಕ ಹಾರನಹಳ್ಳಿ