ಅಂಬರೀಶ್ ಅವರು ಯಾವತ್ತೂ ರಾಜಕುಮಾರ್ ಅವರಂತೆ ಬಹುಮುಖವಿರುವ ಪಾತ್ರಗಳನ್ನು ಮಾಡಿ ಜನರನ್ನು ಮೆಚ್ಚಿಸಿದವರಲ್ಲ. ಡಾ. ವಿಷ್ಣುವರ್ಧನ್ ಅವರಂತೆ ಹೆಚ್ಚು ಫ್ಯಾಮಿಲಿ ಚಿತ್ರಗಳನ್ನು ಮಾಡಲಿಲ್ಲ. ಅಂಬರೀಶ್ ಅವರ ಸಿನಿಮಾಗಳ ಪಟ್ಟಿಯಲ್ಲೂ ಇನ್ನೂರಕ್ಕೂ ಹೆಚ್ಚಿಗೆ ಚಿತ್ರಗಳಿವೆ, ಆದರೆ ಅವೆಲ್ಲವೂ ಇವತ್ತಿಗೆ ನಮಗೆ ಥಟ್ಟನೆ ನೆನಪಾಗುವುದಿಲ್ಲ. ಪ್ರಾರಂಭದ ಬಹಳಷ್ಟು ಚಿತ್ರಗಳಲ್ಲಿ ಅವರು ವಿಲನ್ ಆಗಿಯೇ ಗುರುತಾದವರು.
ಥಟ್ಟನೆ ನೆನಪಿಸಿಕೊಂಡರೆ “ನಾಗರಹಾವು’ ಚಿತ್ರದ ಜಲೀಲನ ಪೆಡಸು ಹಣೆ, ಚುಡಾಯಿಸುವ ಮಾತು, “ಅವಳ ಹೆಜ್ಜೆ’ಯ ಕ್ರಿಮಿನಲ್, “ಅಂತ’ದ ಎದೆ ಝಲ್ಲೆನಿಸುವ ಕನ್ವರ್, “ದೇವರ ಕಣ್ಣು’ ಚಿತ್ರದ ರೇಪಿಸ್ಟ್, “ಧೈರ್ಯಲಕ್ಷಿ’ಯ ಗರ್ವದ ಗಂಡುಗಳೆಲ್ಲಾ ನೆನಪಾಗುತ್ತಾರೆ. ಅದರ ಮಧ್ಯೆ ಅವರು ತುಂಬ ಪ್ರೀತಿ ಹುಟ್ಟಿಸುವಂತೆ ಕಂಡಿದ್ದು ಕಣಗಾಲ್ ನಿರ್ದೇಶನದ “ಶುಭಮಂಗಳ’, “ರಂಗನಾಯಕಿ’, “ಮಸಣದ ಹೂ’ ಚಿತ್ರಗಳ ವಿಶಿಷ್ಟ ಪಾತ್ರಗಳಿಂದಾಗಿ.
ಬಹುಶಃ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಒಂದು ದಶಕದ ನಂತರ ಸ್ಟಾರ್ ಯಾರಾದರೂ ಆಗಿದ್ದಾರೆ ಎಂದರೆ ಅದು ಅಂಬರೀಶ್ ಅವರೇ ಇರಬೇಕು. ಆರಂಭದ 10 ವರ್ಷಗಳ ಕಾಲ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, 80ರ ದಶಕದಲ್ಲಿ ಆರಂಭದಲ್ಲಿ ರೆಬೆಲ್ ಇಮೇಜ್ ಪಡೆದುಕೊಂಡರು. ಹಿಂದಿ ಚಿತ್ರರಂಗದಲ್ಲಿ ಅದಾಗಲೇ ಅಮಿತಾಭ್ ಬಚ್ಚನ್ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದರು.
ಅದೇ ಕನ್ನಡದ ವಿಷಯಕ್ಕೆ ಬಂದಾಗ ಆ್ಯಂಗ್ರಿ ಯಂಗ್ ಮ್ಯಾನ್ ಎಂದರೆ, ಜನ ತೋರಿಸುವುದು ಅಂಬರೀಶ್‌ರನ್ನ. ಅಷ್ಟರಲ್ಲಿ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ನಿರುದ್ಯೋಗ ತಾಂಡವವಾಡುತಿತ್ತು. ಭ್ರಷ್ಟಾಚಾರ ಹೆಚ್ಚತೊಡಗಿತ್ತು. ಕಳ್ಳದಂಧೆ, ಹೊಲಸು ರಾಜಕೀಯ ಇವೆಲ್ಲಾ ಕ್ರಮೇಣ ಹೆಚ್ಚಾಗತೊಡಗಿತ್ತು. ಇವಕ್ಕೆಲ್ಲಾ ಕೊನೆಯೆಂದು ಎಂದು ಸಾಮಾನ್ಯ ಜನ ಸಹ ಕೇಳುವಂಥಾ ಪರಿಸ್ಥಿತಿ ಇತ್ತು. ಇಂಥಾ ಸಂದರ್ಭದಲ್ಲಿ ಅವರು ತಮ್ಮ ಪ್ರತಿನಿಧಿಯಾಗಿ, ಅಪ್ಪಟ ಹೋರಾಟಗಾರನಾಗಿ, ಆ್ಯಂಗ್ರಿ ಯಂಗ್ ಮ್ಯಾನ್‌ನನ್ನು ಕಂಡಿದ್ದು ಅಂಬರೀಶ್‌ರಲ್ಲಿ.