ಕನ್ನಡ ಚಿತ್ರರಂಗದಲ್ಲಿ ಈ ತರಹದ ಒಂದು ಕ್ರೇಜ್ ನೋಡದೇ ತುಂಬಾ ದಿನಾನೇ ಆಗಿತ್ತು. ಆದರೆ ಈಗ ಅಂತಹ ಒಂದು ಕ್ರೇಜ್ ಕ್ರಿಯೇಟ್ ಆಗಿದೆ. ಅದಕ್ಕೆ ಕಾರಣ “ದಿ ವಿಲನ್’. ಪ್ರೇಮ್ ನಿರ್ದೇಶನದ “ದಿ ವಿಲನ್’ ಚಿತ್ರ ಆರಂಭವಾದ ದಿನದಿಂದಲೂ ನಾನಾ ಕಾರಣಗಳಿಗಾಗಿ ಕುತೂಹಲ ಹುಟ್ಟಿಸುತ್ತಲೇ ಬಂದಿದೆ.
ಈಗ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಅದಕ್ಕೆ ಕಾರಣ ಚಿತ್ರದ ಬಿಡುಗಡೆ. ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಶಿವರಾಜಕುಮಾರ್- ಸುದೀಪ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿದೆ.
ಅಭಿಮಾನಿಗಳ ಒತ್ತಾಯದ ಮೇರೆಗೆ ಕೆಲವು ಚಿತ್ರಮಂದಿರಗಳು ಇಂದು ರಾತ್ರಿ 12 ಗಂಟೆಗೆ “ದಿ ವಿಲನ್’ ಪ್ರದರ್ಶನ ಮಾಡಲು ಮುಂದಾಗಿವೆ. ಜೊತೆಗೆ ಬೆಂಗಳೂರಿನ ಅನೇಕ ಚಿತ್ರಮಂದಿರಗಳು ಕೂಡಾ ವಿತರಕರಲ್ಲಿ ಮಧ್ಯರಾತ್ರಿ ಶೋ ನೀಡುವಂತೆ ಕೇಳುತ್ತಿದ್ದಾರೆ.
ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್ ಮಾರಾಟವಾಗಿದ್ದು, ಅಭಿಮಾನಿಗಳು ಟಿಕೆಟ್‌ಗೆ ದುಂಬಾಲು ಬೀಳುತ್ತಿದ್ದಾರೆ. “ದಿ ವಿಲನ್’ ಚಿತ್ರ ಕರ್ನಾಟಕದಲ್ಲಿ ಸುಮಾರು 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೇ, ಹೊರರಾಜ್ಯಗಳಲ್ಲೂ 80 ರಿಂದ 90 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
“ಜೋಗಿ’ ಸಿನಿಮಾದ ಪ್ರಿಂಟ್‌ಗೆ ಆನಂದ್‌ರಾವ್ ಸರ್ಕಲ್ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ 5.30ಗೆ ಪೂಜೆ ಮಾಡಿಸುತ್ತಿದ್ದೆ. ಅಷ್ಟೊತ್ತಿಗೆ ಯಾರೋ ಫೋನ್ ಮಾಡಿ, “ಏನ್ ಸಿನಿಮಾ ಮಾಡಿದ್ದೀಯಾ ಗುರು’ ಎಂದರು. ಅದೆಷ್ಟೊತ್ತಿಗೆ ಸಿನಿಮಾ ಹಾಕಿದ್ದರೋ ನನಗೇ ಗೊತ್ತಿಲ್ಲ. ಈ ಸಿನಿಮಾವನ್ನೂ ಜನ ಅದೇ ರೀತಿ ಹರಸುತ್ತಾರೆ ಎಂಬ ವಿಶ್ವಾಸವಿದೆ.
-ಪ್ರೇಮ್, ನಿರ್ದೇಶಕ
ದೊಡ್ಡ ಮಟ್ಟದಲ್ಲಿ “ದಿ ವಿಲನ್’ ಕ್ರೇಜ್ ಹುಟ್ಟಿದೆ. ಚಿತ್ರರಂಗದಲ್ಲಿ ಈ ತರಹದ ಕ್ರೇಜ್ ಹುಟ್ಟಿದಾಗ ನಿರ್ಮಾಪಕರು ಬಿಗ್ ಬಜೆಟ್ ಹಾಗೂ ಸ್ಟಾರ್‌ಗಳ ಸಿನಿಮಾ ಮಾಡಲು ಮುಂದೆ ಬರುತ್ತಾರೆ. ಚಿತ್ರರಂಗದಲ್ಲೂ ಹೊಸ ಸಂಚಲನ ಉಂಟಾಗುತ್ತದೆ. ತುಂಬಾ ದಿನಗಳ ನಂತರ ಈ ಮಟ್ಟಕ್ಕೆ ಬುಕ್ಕಿಂಗ್ ಆಗುತ್ತಿದೆ.
-ಜಾಕ್ ಮಂಜು “ದಿ ವಿಲನ್’ ವಿತರಕ (ಬಿಕೆಟಿ)