Advertisement

ಹೂಳೆತ್ತಿ ಗ್ರಾಪಂಗೆ ಗ್ರಾಮಸ್ಥರ ಸೆಡ್ಡು

09:49 AM Jun 18, 2018 | |

ಮಡಿವಾಳಪ್ಪ ಹೇರೂರ
ವಾಡಿ: ಬಾವಿ ಸ್ವಚ್ಛಗೊಳಿಸುವಂತೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನದ ಗ್ರಾಪಂ ಆಡಳಿತದ ಬೇಜವಾಬ್ದಾರಿ ಧೋರಣೆಗೆ ಬೇಸತ್ತ ಗ್ರಾಮಸ್ಥರು ತಾವೇ ಮುಂದಾಗಿ ಸ್ವಚ್ಛಗೊಳಿಸಿದ ಪ್ರಸಂಗ ರವಿವಾರ ನಡೆಯಿತು.

Advertisement

ಗ್ರಾಪಂ ಕೇಂದ್ರ ಸ್ಥಾನ ಹೊಂದಿರುವ ರಾವೂರ ಗ್ರಾಮ ನೂರಾರು ಬಾವಿಗಳನ್ನು ಬಾಹುವಿನಲ್ಲಿಟ್ಟುಕೊಂಡ ಐತಿಹಾಸಿಕ ಹಿನ್ನೆಲೆಯುಳ್ಳ ಊರು. ಇಲ್ಲಿ ಶೇ.90ರಷ್ಟು ಮನೆಯ ಅಂಗಳದಲ್ಲಿ ಆಳವಾದ ಪುರಾತನ ಬಾವಿಗಳಿವೆ. ವಿಪರೀತ ಹೂಳು ಮತ್ತು ಭಾರಿ ಪ್ರಮಾಣದ ಕಸಕಡ್ಡಿಗಳಿಂದ ಭರ್ತಿಯಾಗಿ ದುರ್ಗಂಧದ ತಾಣವಾಗಿದ್ದ ಗ್ರಾಮದ ಮಧ್ಯ ಭಾಗದಲ್ಲಿನ 40 ಮತ್ತು 20 ಅಡಿ ಅಗಲದ ಐತಿಹಾಸಿಕ ರಾಮಲಿಂಗ ಬಾವಿ ಸ್ವಚ್ಛತೆಗೆ ಮುಂದಾಗುವ ಮೂಲಕ ಗ್ರಾಮಸ್ಥರು ಆದರ್ಶ ಮೆರೆದಿದ್ದಾರೆ.

ಗ್ರಾಮದ ಗೋವಿಂದಪ್ಪ ಗುರಾಳ, ಅಣವೀರಪ್ಪ ರೊಂಡಿ, ಸಂಗಮ್ಮಾ ಮಾಕಾ, ಈರಮ್ಮ ಸಂಗಾವಿ, ಶಾಂತಮ್ಮ ದಂಡೋತಿ, ಶರಣಮ್ಮ ಹರಸೂರ, ಗಂಗಮ್ಮಾ ರೊಂಡಿ ಎನ್ನುವರು ರವಿವಾರ ಬೆಳಗ್ಗೆ ಸ್ವಯಂ ಪ್ರೇರಿತವಾಗಿ ಬಾವಿ ಸ್ವಚ್ಛತೆಗೆ ಪಣ ತೊಟ್ಟು ಬುಟ್ಟಿ , ಬಕೀಟು ಸೇರಿದಂತೆ ಇತರ ಸಲಕರಣೆಗಳೊಂದಿಗೆ ನೀರಿಗಿಳಿದು ಕಳೆ ಕಿತ್ತು ಹಾಕಿದರು. ಹೂಳೆತ್ತಿ ಹೊರ ಚೆಲ್ಲುವ ಮೂಲಕ ಬಾವಿಯನ್ನು ಕೊಳೆಯಿಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾದರು.

ಚುನಾಯಿತ ಸದಸ್ಯರು ಹಾಗೂ ಗ್ರಾಪಂ ಅಧಿಕಾರಿಗಳು ಕರ್ತವ್ಯ ಮರೆತು ಮಲಗಿದ್ದರಿಂದ ನಾವೇ ಬಾವಿ ಸ್ವಚ್ಛಗೊಳಿಸಬೇಕಾದ ಪ್ರಸಂಗ ಎದುರಾಯಿತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಜಾಗೃತಿಯಿಂದ ಐತಿಹಾಸಿಕ ಬಾವಿಯೊಂದು ಕೊನೆಗೂ ಕಸ-ಕೊಳೆಯಿಂದ ಮುಕ್ತಗೊಂಡು ನೀರು ಬಳಕೆಗೆ ಆಹ್ವಾನ ನೀಡುತ್ತಿದೆ. ಗ್ರಾಮದ ಶ್ರೀರಾಮಲಿಂಗ ಮಠದ ಹತ್ತಿರದ ರಾಮಲಿಂಗ ಬಾವಿ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇದು ಇಡೀ ಗ್ರಾಮಕ್ಕೆ ನೀರಿನ ಅನುಕೂಲತೆ ಒದಗಿಸುವ ಮುಖ್ಯ ಬಾವಿಯಾಗಿದೆ. ನಿರ್ವಹಣೆ ಕೊರತೆಯಿಂದ ಇಡೀ ಬಾವಿ ಹೂಳಿನಿಂದ ಆವರಿಸಿತ್ತು. ಕಸದಿಂದ ಗೊಬ್ಬು ನಾರುತ್ತಿತ್ತು. ಕೊಳೆ ನೀರಿನಿಂದ ಭರ್ತಿಯಾಗಿ ರೋಗಾಣುಗಳ ತಾಣವಾಗಿತ್ತು. ಇದರ ಸ್ವಚ್ಛತೆ ಮಾಡುವಂತೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಗ್ರಾಪಂ ಅಧಿಕಾರಿಗಳು ನಿರ್ಲಕ್ಷಿಸಿದ್ದರು. ಕುಂದುಕೊರತೆಗಳ ಕುರಿತು ಸಾರ್ವಜನಿಕರು ಮನವಿ ನೀಡಲಿ ಅಥವಾ ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಳ್ಳಲಿ. ತಮಗೇನೂ ಸಂಬಂಧವಿಲ್ಲದಂತೆ ಗ್ರಾಪಂ ಅಧಿಕಾರಿಗಳು ವರ್ತಿಸುತ್ತಾರೆ. ಇವರ ಬೇಜವಾಬ್ದಾರಿಗೆ
ಬೇಸತ್ತು ಗ್ರಾಮಸ್ಥರು ಸ್ವಚ್ಛಗೊಳಿಸಿರುವುದು ಗ್ರಾಪಂ ಆಡಳಿತಕ್ಕೆ ನಾಚಿಕೆ ತರಿಸುವಂತಿದೆ. ಬಾವಿಯ ಜೀರ್ಣೋದ್ಧಾರಕ್ಕೆ ಆಡಳಿತ ಇನ್ನಾದರೂ ಕ್ರಮಕೈಗೊಳ್ಳಲಿ.
 ಮಲ್ಲಿಕ್‌ಪಾಶಾ ಮೌಜನ್‌, ಸಿದ್ಧಲಿಂಗ ಬಾಳಿ, ಯುವ ಮುಖಂಡರು 

Advertisement
Advertisement

Udayavani is now on Telegram. Click here to join our channel and stay updated with the latest news.

Next