ರಾಯಚೂರು: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿ ಸುವಂತೆ ಆಗ್ರಹಿಸಿ ಕಳೆದ 10 ದಿನಗಳಿಂದ ನಡೆದಿರುವ ಹೋರಾಟ ಶನಿವಾರ ತೀವ್ರಗೊಂಡಿದ್ದು, ಮಹಿಳೆಯರು ಒನಕೆ ಚಳವಳಿ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.
ನಗರದ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಮದ್ಯ ನಿಷೇಧ ಆಂದೋಲನ ಕರ್ನಾಟಕದಿಂದ ಹೋರಾಟ ನಡೆಸಲಾಗುತ್ತಿದೆ. ಅದರ ಭಾಗವಾಗಿ ನೂರಾರು ಮಹಿಳೆಯರು ಒನಕೆಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳ ಮೂಲಕ ಅಬಕಾರಿ ಇಲಾಖೆ ಕಚೇರಿವರೆಗೂ ರ್ಯಾಲಿ ನಡೆಸಿದರು.
ಜಿಲ್ಲೆಯ 69 ಗ್ರಾಪಂಗಳಲ್ಲಿ 178ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ, ಅಬಕಾರಿ ಇಲಾಖೆಗೆ ಅಂಕಿ ಸಂಖ್ಯೆ ಸಮೇತ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಪ್ರತಿ ಹಳ್ಳಿಯಲ್ಲಿ ಐವರು ಮಹಿಳೆಯರ ಕಾವಲು ಸಮಿತಿ ರಚಿಸಿ ಸಮಿತಿಗೆ ಅರೆ ನ್ಯಾಯಾಂಗ ವ್ಯವಸ್ಥೆ ಕಲ್ಪಿಸಬೇಕು, ಆಯಾ ಹಳ್ಳಿಗಳ ಸರಹದ್ದಿನಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದು. ಈ ವಿಚಾರವಾಗಿ ತಕ್ಷಣ ಮುಖ್ಯಮಂತ್ರಿ ಸಂಘಟನೆಯ ನಿಯೋಗದ ಜತೆಗೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ವಿದ್ಯಾ ಪಾಟೀಲ್, ಅಭಯ್, ಮೋಕ್ಷಮ್ಮ, ವಿರುಪಮ್ಮ, ಗುರುರಾಜ, ಮಾರೆಪ್ಪ, ಶರಣಮ್ಮ, ಬಸವರಾಜ ಇದ್ದರು.