Advertisement

ಕೊಯಿಲ- ತಿಮರಗುಡ್ಡೆ ರಸ್ತೆ ಗ್ರಾಮಸ್ಥರಿಂದಲೇ ದುರಸ್ತಿ

03:00 AM Jun 15, 2018 | Karthik A |

ಆಲಂಕಾರು: ನಾವು ಉಪಯೋಗಿಸುವ ರಸ್ತೆ ನಮ್ಮದು. ಅದು ನಮ್ಮಿಂದಲೇ ದುರಸ್ತಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೊಯಿಲ ಗ್ರಾಮದ ಕೊಲ್ಯ- ತಿಮರಗುಡ್ಡೆ ಕಚ್ಚಾ ರಸ್ತೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಬುಧವಾರ ಊರಿನ ನಾಗರಿಕರೇ ದುರಸ್ತಿ ಮಾಡಿದರು. ಕೊಯಿಲ – ತಿಮರಗುಡ್ಡೆ ರಸ್ತೆ ಮಳೆಗಾಲ ಬಂತೆಂದರೆ ದುರ್ಗಮವಾಗುತ್ತದೆ. ವಾಹನ ಸಂಚಾರ ದುಸ್ತರವಾಗುತ್ತದೆ. ಪಾದಚಾರಿಗಳಿಗೂ ಕಷ್ಟವಾಗುತ್ತಿದೆ. 2000ನೇ ಇಸವಿಯಲ್ಲಿ ಕೊಯಿಲ ಗ್ರಾ.ಪಂ.ನಲ್ಲಿ ನ್ಯಾಯವಾದಿ ರವಿಕಿರಣ್‌ ಕೊಯಿಲ ಅಧ್ಯಕ್ಷರಾಗಿದ್ದಾಗ 1 ಕಿ.ಮೀ. ಉದ್ದದ ರಸ್ತೆಗೆ ಅನುದಾನ ಒದಗಿಸಿದ್ದರು. ಆ ಬಳಿಕ 16 ವರ್ಷಗಳಲ್ಲಿ ಊರವರೇ ರಸ್ತೆ ದುರಸ್ತಿ ಮಾಡುತ್ತಿದ್ದಾರೆ. ಗ್ರಾ.ಪಂ.ನವರು ರಸ್ತೆಗೆ ಹಾಸಲು ಕೆಂಪು ಕಲ್ಲು ಒದಗಿಸಿಕೊಟ್ಟರೆ, 10-15 ಜನ ಸೇರಿ ಅದನ್ನು ಹಾಸುತ್ತಾರೆ. ಕಳೆದ ಬೇಸಗೆಯಲ್ಲಿ ಕೊçಲ ಗ್ರಾ.ಪಂ. ಈ ರಸ್ತೆಯನ್ನು ದುರಸ್ತಿ ಮಾಡಿತ್ತು. ಇದರ ಬೆನ್ನಲ್ಲೇ ಮಳೆಗಾಲ ಪ್ರಾರಂಭವಾಗಿದ್ದರಿಂದ ರಸ್ತೆಯಲ್ಲಿ ಕೆಸರು ತುಂಬಿ ಸಂಚಾರಕ್ಕೆ ಸಂಚಕಾರ ತಂದಿತ್ತು.

Advertisement


ರಸ್ತೆಯ ತುರ್ತು ದುರಸ್ತಿಗಾಗಿ ಈ ಭಾಗದ ಜನರು ಗ್ರಾ.ಪಂ.ಗೆ ಮನವಿ ನೀಡಿದರು. ಇದಕ್ಕೆ ಸ್ಪಂದಿಸಿದ ಸದಸ್ಯ ಸುಂದರ ನಾಯ್ಕ ಹಾಗೂ ಗ್ರಾ.ಪಂ. ಅಧ್ಯಕ್ಷೆ ಹೇಮಾ ಮೋಹನದಾಸ್‌ ಶೆಟ್ಟಿ, ಗ್ರಾ.ಪಂ. ವತಿಯಿಂದ ಮೂರು ಪಿಕ್‌ – ಅಪ್‌ ಚರೆಲ್‌ (ದೊಡ್ಡ ಗಾತ್ರದ ಮರಳು) ನೀಡಿದ್ದಾರೆ. ಅದೂ ಸಾಲದೇ ಹೋದಾಗ ಊರವರೇ ಹಣ ಸಂಗ್ರಹಿಸಿ, ಮತ್ತೆ ಎರಡು ಲೋಡ್‌ ಮರಳು ತರಿಸಿ, ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ. ಬುಧವಾರ 15ಕ್ಕೂ ಹೆಚ್ಚು ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು. ರಸ್ತೆಯಲ್ಲಿದ್ದ ಕೆಸರನ್ನು ತೆಗೆದು ಅಲ್ಲಲ್ಲಿ ಕಲ್ಲು ಹಾಕಿ, ಗುಂಡಿ ಮುಚ್ಚಿ, ಚರಲ್‌ ಹೊಯಿಗೆಯನ್ನು ಹಾಸಿ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿ ಮಾಡಿದ್ದಾರೆ. ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸದೆ ತಮ್ಮ ರಸ್ತೆಯನ್ನು ತಾವೇ ದುರಸ್ತಿ ಮಾಡುತ್ತಾ ಬಂದು ಇತರರಿಗೆ ಮಾದರಿಯಾಗಿದ್ದಾರೆ. ಬುಧವಾರ ಪತ್ರಕರ್ತ ಕೆ.ಎಸ್‌. ಬಾಲಕೃಷ್ಣ ಕೊಯಿಲ ಅವರ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಕುಶಾಲಪ್ಪ ಗೌಡ ಕೊಲ್ಯ, ಬೆಳ್ಳಿಯಪ್ಪ ಗೌಡ ತಿಮರಗುಡ್ಡೆ, ತಿಮ್ಮಪ್ಪ ಗೌಡ ಓಕೆ, ಶೇಖರ ಕೊಲ್ಯ, ತಿಮ್ಮಪ್ಪ ಗೌಡ ತಿಮರಗುಡ್ಡೆ, ಪ್ರವೀಣ್‌ರಾಜ್‌, ಡೊಂಬಯ್ಯ ಗೌಡ, ದಯಾನಂದ, ಹರೀಶ, ಕೃಷ್ಣಪ್ಪ ತಿಮರಗುಡ್ಡೆ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next