ಹೆಬ್ರಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಕೇವಲ 800 ವರ್ಷಗಳ ಇತಿಹಾಸ ಹೊಂದಿರುವ ದಾಖಲೆ ಮಾತ್ರವಲ್ಲ, ಬ್ರಹ್ಮಕಲಶೋತ್ಸವ ಸಂದರ್ಭ ತರಕಾರಿ ಬೆಳೆಯುವುದರಲ್ಲಿಯೂ ದಾಖಲೆ ನಿರ್ಮಾಣವಾಗುತ್ತಿದೆ. ಎಪ್ರಿಲ್‌ನಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನ ವ್ಯಾಪ್ತಿಯ ಸುಮಾರು 16 ಗ್ರಾಮಗಳ 14 ಎಕ್ರೆ ಜಾಗದಲ್ಲಿ ಸೌತೆಕಾಯಿ, ಬೂದುಕುಂಬಳ, ಸಿಹಿಕುಂಬಳ, ಬೆಂಡೆಕಾಯಿ, ತೊಂಡೆಕಾಯಿ, ಟೊಮೆಟೋ ಮೊದಲಾದ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಒಟ್ಟು 50 ಟನ್ ತರಕಾರಿ ಬೆಳೆಸುವ ಗುರಿ ಇರಿಸಿಕೊಳ್ಳಲಾಗಿದೆ. ‘ನಮ್ಮ ಬ್ರಹ್ಮಕಲಶೋತ್ಸವಕ್ಕೆ ಹೆಚ್ಚೆಂದರೆ 30 ಟನ್ ತರಕಾರಿಗಳು ಸಾಕು. ಆದರೂ ನಾವು ಹೆಚ್ಚಿನ ಗುರಿ ಇರಿಸಿಕೊಂಡಿದ್ದೇವೆ’ ಎನ್ನುತ್ತಾರೆ ಬೊಮ್ಮಾರ ಬೆಟ್ಟಿನ ಕೃಷಿಕ ಸುರೇಶ ನಾಯಕ್.
ಕಳೆದ ಎರಡು ತಿಂಗಳಿಂದ ವಿವಿಧ ಗ್ರಾಮಗಳ ಸದಸ್ಯರು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ಜಾಗದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ತರಕಾರಿಗಳು ಬೆಳೆದಂತೆ ದೇವಸ್ಥಾನಕ್ಕೆ ಕಳುಹಿಸಲಾಗುತ್ತಿದೆ. ಹೀಗೆ ದೇವಸ್ಥಾನಕ್ಕೆ ಈಗಾಗಲೇ ಕೆಲವಂಶ ಸೌತೆಕಾಯಿ, ಕುಂಬಳಕಾಯಿ ತರಕಾರಿಗಳು ಸಮರ್ಪಣೆಯಾಗಿವೆ.
ಬೊಮ್ಮಾರಬೆಟ್ಟು ಕುಜಂಬೈಲು – ಸೀಂಬ್ರ, ಬೊಮ್ಮಾರಬೆಟ್ಟು ಬಸ್ತಿ, ಬಜೆ ಮೇಲ್ಮನೆ, ಕೊಂಡಾಡಿ, ಮೊಯಿಲಿ ಕೇರಿ, ಓಂತಿಬೆಟ್ಟು ಅಂಜಾರು, ಪರೀಕ ಸೇತುವೆಯ ಹತ್ತಿರ, ಮೂಡು ಅಂಜಾರು-ಮುಟ್ಟಿಕಲ್ಲು, ಮೈಕಾಲ್(ಪುತ್ತಿಗೆ), ಪುತ್ತಿಗೆ ಮದಗ, ಪಡ್ಡಾಮ್, ಕೆಳಮನೆ ಅಂಜಾರು ಮಠದ ಹತ್ತಿರ, ಪುತ್ತಿಗೆ ಮಠದ ಹತ್ತಿರ, ಪುತ್ತಿಗೆ ದೇವಸ್ಥಾನದ ಬೆಟ್ಟು ಪ್ರದೇಶದಲ್ಲಿ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಸುಮಾರು 350 ಜನರು ಗುಂಪಾಗಿ ಸೇರಿ ತರಕಾರಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.