ಬೇಲೂರು: ಮಲ್ಲನಹಳ್ಳಿ ಗ್ರಾಮದಲ್ಲಿ ಹಾದು ಹೋಗುವ ಟಿಪ್ಪರ್ ಲಾರಿಗಳ ಅತಿವೇಗದಿಂದ ಅಪಘಾತ ಉಂಟಾಗುತ್ತಿದೆ. ದೂಳಿಯಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಗ್ರಾಮಸ್ಥರಾದ ಪ್ರಮೋದ್, ಮಲ್ಲನಹಳ್ಳಿಯಿಂದ 6 ಕಿ.ಮೀ. ದೂರದ ಸಂಶೆಟ್ಟಿಹಳ್ಳಿ ಕಾವಲಿನಲ್ಲಿ ನಾಲ್ವರು ಕಲ್ಲುಗಣಿಗಾರಿಕೆ ನಡೆಸುತ್ತಾರೆ. ಈ ಮಾರ್ಗದಲ್ಲಿ 100ಕ್ಕೂ ಹೆಚ್ಚಿನ ಟಿಪ್ಪರ್ ಲಾರಿಗಳು ಹಗಲು ರಾತ್ರಿ ಸಂಚರಿಸುತ್ತವೆ. ಅತಿವೇಗವಾಗಿ ಸಂಚರಿಸುವುದರಿಂದ ಸಣ್ಣ ಪುಟ್ಟ ವಾಹನಗಳಿಗೆ ರಸ್ತೆಯಲ್ಲಿ ಜಾಗ ನೀಡುವುದಿಲ್ಲ. ಇರುವ ಕಿರಿದಾದ ರಸ್ತೆಯ ತುಂಬ ಅಡ್ಡಾದಿಡ್ಡಿ ಟಿಪ್ಪರ್ ಲಾರಿಗಳು ಓಡಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ದೂಳು: ಗ್ರಾಮದ ನಡುವೆ ಹಾದು ಹೋಗುವ ಕಾರಣದಿಂದ ಇಡೀ ಗ್ರಾಮವೇ ದೂಳು ಮಯವಾಗಿ ಜನರು ಅನಾರೋಗ್ಯದಿಂದ ಆಸ್ಪತ್ರೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಟಿಪ್ಪರ್ ಲಾರಿ ಚಾಲಕರನ್ನು ಕೇಳಿದರೆ, ಉಡಾಫೆ ಯಿಂದ ವರ್ತಿಸುತ್ತಾರೆ ಎಂದು ದೂರಿದರು.
ನಮಗೆ ನ್ಯಾಯ ಬೇಕು: ನಿಮ್ಮ ಅಪ್ಪನದ ರಸ್ತೆ ಎಂದು ವೇಗದಿಂದ ಹೋಗುತ್ತಾರೆ. ಇದ್ದರಿಂದಲೇ ಅಪಘಾತಗಳು ಸಂಭವಿಸುತ್ತಿವೆ. ಬೈಕ್, ಕಾರುಗಳು ಓಡಾಡುವುದೇ ಕಷ್ಟವಾಗಿದೆ. ಬೈಕ್ ಸವಾರನಿಗೆ ಟಿಪ್ಪರ್ ಲಾರಿ ದಾರಿ ಬಿಡದೆ ಕಾರಣಕ್ಕೆ ಸೈಡಿಗೆ ಹೋಗಬೇಕಾಯಿತು. ಈ ವೇಳೆ ಮಗುವಿಗೆ ಬೈಕ್ ತಗುಲಿ ತೀವ್ರ ಗಾಯವಾಗಿದೆ. ಮಗು ಚಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಮಗೆ ನ್ಯಾಯ ಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ನಿಧಾನವಾಗಿ ಚಲಿಸಲಿ: ರಸ್ತೆಯಲ್ಲಿ ಟಿಪ್ಪರ್ ಲಾರಿಗಳು ಸಂಚರಿಸಲು ನಾವುಗಳು ಬೇಡ ಎನ್ನುವುದಿಲ್ಲ. ದಿನ ನಿತ್ಯ ದೂಳು ಹೇಳದಂತೆ ನೀರು ಹಾಕಬೇಕು, ರಸ್ತೆಯನ್ನು ವಿಸ್ತರಿಸಬೇಕು. ಹಾಗೆಯೇ ಟಿಪ್ಪರ್ ಲಾರಿ ಚಾಲಕರು ಗ್ರಾಮದ ಸಮೀಪದಲ್ಲಿ ಮಿತಿಯಲ್ಲಿ ಸಂಚರಿಸಬೇಕು. ರಸ್ತೆಯ ಇಕ್ಕಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರವಿದೆ. ಇದನ್ನು ಮನಗೊಂಡು ಸಂಚರಿಸಲಿ. ಅದನ್ನು ಬಿಟ್ಟು ಉಡಾಫೆಯಿಂದ ಅತಿವೇಗದಿಂದ ಚಲಿಸಿದರೆ, ಇಲ್ಲಿ ಯಾವ ಕಾರಣಕ್ಕೂ ದಾರಿ ಬಿಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ಗ್ರಾಮಸ್ಥರಾದ ಕಾಂತರಾಜ್, ಮಂಜಣ್ಣ, ಮಂಜುನಾಥ, ಜಗದೀಶ್, ನಾಗರಾಜ್, ತೇಜಮೂರ್ತಿ, ರವೀಶ್, ರಾಜೇಶ್, ಪಾಪು ತೀರ್ಥಕುಮಾರ್, ರಘು ಮುಂತಾದವರು ಇದ್ದರು.