Advertisement

ಅರಣ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

06:48 AM Jun 17, 2020 | Lakshmi GovindaRaj |

ರಾಮನಗರ: ಸರ್ಕಾರ ಗ್ರಾಮಸ್ಥರಿಗೆ ಕೊಟ್ಟಿರುವ ಜಮೀನು ಅರಣ್ಯ ಇಲಾಖೆಯವರು ತಮ್ಮ ಇಲಾಖೆಗೆ ಸೇರಿದ ಜಮೀನು ಎಂದು ಪದೇ ಪದೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಬಿಡದಿ ಹೋಬಳಿಯ ಭೈರಾಗಿ  ಕಾಲೋನಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ಭೈರಾಗಿ ಕಾಲೋನಿಯಲ್ಲಿ ಕಾಲೋನಿ ಮತ್ತು ವಾಜರ ಹಳ್ಳಿ ಗ್ರಾಮಸ್ಥರು ಜಮಾಯಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ವಾಜರಹಳ್ಳಿ ಗ್ರಾಮದಲ್ಲಿ ಸರ್ವೇ  ಸಂಖ್ಯೆ 28, 30, 31 ಹಾಗೂ 34 ಇಲ್ಲಿ ಸರ್ಕಾರ 50 ವರ್ಷಗಳ ಹಿಂದೆಯೇ ಅಂದರೆ, ತಮ್ಮ ತಾತ, ತಂದೆಯಂದಿರ ಕಾಲದಲ್ಲಿಯೇ ಭೂಮಿ ಮಂಜೂರು ಮಾಡಿದೆ.

ತಮ್ಮ ಪೂರ್ವಜರು 80 ವರ್ಷಗಳಿಂದ ಭೈರಾಗಿ ಕಾಲೋನಿ ಹಾಗೂ  ವಾಜರಹಳ್ಳಿ ಯಲ್ಲಿ ವಾಸವಿದ್ದರು. ಆದರೆ ಅರಣ್ಯ ಇಲಾಖೆ ಈ ಭೂಮಿ ತಮ್ಮದು ಎಂದು ಹೇಳಿ ಎಲ್ಲರನ್ನು ಒಕ್ಕಲೆಬ್ಬಿ ಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು. ಕಾಲೋನಿಯಲ್ಲಿ ಬಹುತೇಕ ಪರಿಶಿಷ್ಟ ಜಾತಿ ಹಾಗೂ ಪಂಗಡದವರೇ  ವಾಸಿಸುತ್ತಿದ್ದು, ಸಣ್ಣ, ಅತೀ ಸಣ್ಣ ರೈತ ರಾಗಿ ಭೂ ಹಿಡುವಳಿ ಮಾಡಿಕೊಂಡು ಜೀವನ ಸಾಗಿಸು ತ್ತಿದ್ದು, ತಮಗೆ ಈ ತುಂಡು ಭೂಮಿಯೇ ಜೀವನಾಧಾರವಾಗಿದೆ.

ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳ ಉಪಟಳಕ್ಕೆ ನೊಂದಿರುವುದಾಗಿ  ತಿಳಿಸಿದರು. ಒಂದು ವೇಳೆ ಅರಣ್ಯ ಇಲಾಖೆ ತಮ್ಮನ್ನು ಒಕ್ಕಲೆಬ್ಬಿಸಿದರೆ ಇಲಿ ವಾಸಿಸುತ್ತಿರುವ ಎಲ್ಲಾ 450 ಕುಟುಂಬಗಳು ಅಕ್ಷರಶಃ ಬೀದಿಗೆ ಬೀಳುತ್ತವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹಾಗೂ  ತಾಲೂಕು ಆಡಳಿತ ತಕ್ಷಣ ಮಧ್ಯಪ್ರವೇಶಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next