ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎ.ನಕ್ಕಲಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಸಣ್ಣ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರವನ್ನು ನಡೆಸಿದ್ದಾರೆಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಟುಂಬ ನಿರ್ವಹಣೆ: ಶಿಡ್ಲಘಟ್ಟ ತಾಲೂಕಿನಬಶೆಟ್ಟಹಳ್ಳಿ ಹೋಬಳಿ ಎ.ನಕ್ಕಲಹಳ್ಳಿ ಗ್ರಾಮದ ಸರ್ವೆ ನಂ.30 ರಲ್ಲಿ 299.27 ಗುಂಟೆ ಗೋಮಾಳಜಮೀನಿದ್ದು, ಈ ಜಮೀನಿನಲ್ಲಿ ಎ.ನಕ್ಕಲಹಳ್ಳಿ, ಬುಡುಗವಾರ್‌ಹಳ್ಳಿ, ಮಾದೇನಹಳ್ಳಿಯ ಪರಿಶಿಷ್ಟ ಜಾತಿ ಹಾಗೂ ಇತರೆ ವರ್ಗಗಳ ಸಣ್ಣ ರೈತರು ಸುಮಾರು 60 ವರ್ಷಗಳಿಂದ ಅನುಭವದಲ್ಲಿದ್ದು, ವಿವಿಧ ರೀತಿಯ ಬೆಳೆಗಳನ್ನಿಟ್ಟು ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿಯಾಗಿ ತಮ್ಮ ಇಲಾಖೆಗೆ ಸೇರಿದ ಜಮೀನೆಂದು ಹೇಳಿ ಇಲ್ಲಿ ಯಾವುದೇ ವಿಧವಾದ ಸಾಗುವಳಿ ಮಾಡಬಾರದೆಂದು ಮಾಡಿದರೆ ಕೇಸು ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಬಡ ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ರೈತರು ಹಾಗೂ ಗ್ರಾಮಸ್ಥರು ಆರೋಪಿಸಿದರು.
ದೌರ್ಜನ್ಯ, ದಬ್ಟಾಳಿಕೆ ಆರೋಪ: ನಮ್ಮ ಪೂರ್ವಜರು ಸುಮಾರು ವರ್ಷಗಳಿಂದ ಇಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವು ಬಲಾಡ್ಯರು ತಮ್ಮ ಅಧಿಕಾರ ಚಲಾಯಿಸಿ ಜಮೀನು ಮಂಜೂರು ಮಾಡಿಕೊಂಡಿದ್ದಾರೆ. ಆದರೆ ನಾವು ಸರ್ಕಾರದ ಆದೇಶಗಳಂತೆ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಂಜೂರು ಮಾಡಬೇಕೆಂದು ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಜೊತೆಗೆ ಫಾರಂ ನಂ 53 ಮತ್ತು 57ಹಾಕಿಕೊಂಡಿದ್ದೇವೆ. ಆದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾಕಾರಣ ದೌರ್ಜನ್ಯ ಮತ್ತು ದಬ್ಟಾಳಿಕೆ ನಡೆಸುತ್ತಿದ್ದಾರೆಂದು ಸಾಗುವಳಿ ಮಾಡುತ್ತಿರುವ ಸಣ್ಣ ರೈತರು, ಮಹಿಳೆಯರು ಹಾಗೂ ವೃದ್ಧರು ಅಸಮಾಧಾನ ವ್ಯಕ್ತಪಡಿಸಿದರು.
60 ವರ್ಷಗಳಿಂದ ಎಲ್ಲಿ ಹೋಗಿದ್ದರು?: ಶಿಡ್ಲಘಟ್ಟ ತಾಲೂಕಿನ ಎ.ನಕ್ಕಲಹಳ್ಳಿ ಗ್ರಾಮದ ಸರ್ವೆ ನಂ.30 ರಲ್ಲಿ ಸುಮಾರು 60 ವರ್ಷಗಳಿಂದ ಸ್ವಾಧೀನದಲ್ಲಿದ್ದು, ಸಾಗುವಳಿ ಮಾಡುತ್ತಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಇಷ್ಟು ವರ್ಷಗಳಿಂದ ಜಮೀನು ಉಳಿಸಿಕೊಳ್ಳಲು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ಗ್ರಾಮಸ್ಥರು ಸರ್ಕಾರ ಸತ್ಯಾಸತ್ಯತೆ ಪರಿಶೀಲಿಸಿ ಬಡ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಹಾಗೂ ಅರಣ್ಯ ಇಲಾಖಾಧಿಕಾರಿಗಳ ದೌರ್ಜನ್ಯವನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಮೀನಿನ ಸಾಗುವಳಿ ಮಾಡುತ್ತಿರುವ ಗ್ರಾಮದ ಮುಖಂಡರಾದ ಈರಪ್ಪ, ವೆಂಕಟರೆಡ್ಡಿ, ನಾಗರಾಜ್, ಹಾಲುಪರೀಕ್ಷಕ ಸೀನಪ್ಪ, ಮಂಜುನಾಥ್,ದೇವರಾಜ್, ವೆಂಕಟೇಶಪ್ಪ, ಸರೋಜಮ್ಮ ಮತ್ತಿತರರ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಬಡ ರೈತರು ಉಪಸ್ಥಿತರಿದ್ದರು.
ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಎ.ನಕ್ಕಲಹಳ್ಳಿಯ ರೈತರ ಸಮಸ್ಯೆ ಕುರಿತು ತಮಗೆ ಅರಿವು ಇಲ್ಲ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುತ್ತೇನೆ.
–ಕೆ.ಅರುಂಧತಿ, ತಹಶೀಲ್ದಾರ್ ಶಿಡ್ಲಘಟ್ಟ