ಜಮಖಂಡಿ: ಮಹಾರಾಷ್ಟ್ರದ ಕೃಷ್ಣಾ ಕಣಿವೆ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ನದಿ ತೀರದ ಗ್ರಾಮಸ್ಥರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.
ಕೃಷ್ಣಾನದಿಗೆ 1.48 ಲಕ್ಷ ಕ್ಯೂಸೆಕ್ ನೀರು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹರಿದು ಬರುತ್ತಿದೆ. ಅಂದಾಜು 2.40 ಲಕ್ಷ ಕ್ಯೂಸೆಕ್ ನೀರು ಹರಿದು ಬಂದರೇ ಶಿರಗುಪ್ಪಿ, ಮುತ್ತೂರ, ಮೈಗೂರ, ಕಂಕಣವಾಡಿ, ಕಡಕೋಳ ಸನಾಳ ಸೇರಿದಂತೆ 16 ಗ್ರಾಮಗಳು ಪ್ರವಾಹ ಭೀತಿ ಎದುರಿಸಲಿವೆ. ಕುಂಬಾರಹಳ್ಳ ಮತ್ತು ಕುಂಚನೂರ ಭಾಗಶಃ ಮುಳುಗಡೆಯಾಗುವ ಸಾಧ್ಯತೆಯಿದೆ.
ತಾಲೂಕಾಡಳಿತ ಪ್ರವಾಹ ನಿಯಂತ್ರಣಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದು, ಪ್ರವಾಹ ಎದುರಾಗುವ ಪ್ರತಿಯೊಂದು ಗ್ರಾಮಗಳಿಗೆ ಓರ್ವ ನೋಡಲ್ ಅಧಿ ಕಾರಿಯನ್ನು ನೇಮಕ ಮಾಡಿದೆ. ನೋಡಲ್ ಅ ಧಿಕಾರಿಗಳು ಪ್ರತಿ ಗಂಟೆಗೊಮ್ಮೆ ನೀರಿನ ಮಟ್ಟದ ವರದಿ ತಿಳಿಸುವಂತೆ ಸೂಚಿಸಲಾಗಿದೆ. ಈಗಾಗಲೇ ತಾಲೂಕಾಡಳಿತ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಿ ನದಿ ತೀರಕ್ಕೆ ಜನ ಮತ್ತು ಜಾನುವಾರುಗಳನ್ನು ಬಿಡದಂತೆ ನೋಡಿಕೊಳ್ಳಲು ತಾಲೂಕು ಆಡಳಿತ ಸೂಚನೆ ನೀಡಿದೆ.
ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ 1.48 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಜಲಾಶಯದಲ್ಲಿ ಪ್ರಸಕ್ತ 522 ಮೀ. ನೀರು ಇದ್ದು, 4 ಸಾವಿರ ಕ್ಯೂಸೆಕ್ ದಷ್ಟು ನೀರು ಸಂಗ್ರಹಿಸಲಾಗಿದೆ. ಒಳಹರಿವು ಮೂಲಕ ಬರುತ್ತಿರುವ 1.44 ಲಕ್ಷ ಕ್ಯೂಸೆಕ್ ಹಾಗೂ ಹೊರಗಡೆ ಬಿಡಲಾಗುತ್ತಿದೆ. ಕೋಯ್ನಾ ಜಲಾಶಯ ವ್ಯಾಪ್ತಿಯಲ್ಲಿ 142 ಮಿ.ಮೀ, ನೌಜಾದಲ್ಲಿ 122 ಮಿಮೀ, ಮಹಾಬಳೇಶ್ವರದಲ್ಲಿ 126 ಮಿಮೀ ಮಳೆ ಸುರಿಯುತ್ತಿದೆ.